ಇಸ್ರೋ ಸಾಧನೆ | ಪಿಎಸ್‌ಎಲ್‌ವಿ ರಾಕೆಟ್‌ನಿಂದ ಅಂತರಿಕ್ಷದಲ್ಲಿ ಪ್ರೊಬಾ-3 ಉಪಗ್ರಹಗಳ ಯಶಸ್ವಿ ನಿಯೋಜನೆ
PC : PTI
ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ನಿರ್ಮಿತ ಪಿಎಸ್‌ಎಲ್‌ವಿ ರಾಕೆಟ್ ಗುರುವಾರ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಎರಡು ‘ಪ್ರೊಬಾ-3’ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಶಸ್ವಿಯಾಗಿ ನಿಯೋಜಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಸಂಜೆ 4:04ರ ವೇಳೆಗೆ ಪ್ರೊಬಾ-3 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್ ಅಂತರಿಕ್ಷಕ್ಕೆ ಉಡಾವಣೆಗೊಂಡಿತು.
ಪ್ರೊಬಾ-3 ಉಪಗ್ರಹಗಳನ್ನು ಬುಧವಾರ ಉಡಾವಣೆಗೊಳ್ಳಲಿತ್ತು. ಆದರೆ ಕೆಲವೊಂದು ‘ಅಸಮಂಜಸ’ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.
ಪಿಎಸ್‌ಎಲ್‌ವಿಯ 61ನೇ ಉಡಾವಣೆ ಇದಾಗಿದೆ. ಖಗ್ರಾಸ ಸೂರ್ಯಗ್ರಹಣವನ್ನು ಅಧ್ಯಯನ ಮಾಡುವುದಕ್ಕಾಗಿ ಪ್ರೊಬಾ-3 ಉಪಗ್ರಹಗಳನ್ನು ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಉಡಾವಣೆಗೊಳಿಸಿದೆ. ಈ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಜೊತೆಯಾಗಿ ಸಂಚರಿಸುತ್ತಾ ಕಾರ್ಯಾಚರಣೆ ನಡೆಸಲಿವೆ.
ಒಟ್ಟು 545 ಕೆ.ಜಿ. ಭಾರದ ಈ ಎರಡು ಉಪಗ್ರಹಗಳು 44.5 ಮೀಟರ್ ಉದ್ದದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಉಡಾವಣೆಗೊಂಡ ಸುಮಾರು 18 ನಿಮಿಷಗಳ ಆನಂತರ ಅವು ಭೂಮಿಯಿಂದ 600 ಕಿ.ಮೀ. ಎತ್ತರದಲ್ಲಿ ನಿಯೋಜನೆಗೊಂಡವು.