ಕೇರಳ | ಹೊಸ ಕಾದಂಬರಿ ಪ್ರಕಟನೆಯ ಅನುಮತಿಗೆ ಆಗ್ರಹ: ಮಾರ್ಚ್ 2ರಿಂದ ಆಮರಣಾಂತ ಉಪವಾಸಕ್ಕೆ ಮುಂದಾದ ಜೈಲಿನಲ್ಲಿರುವ ಮಾವೋವಾದಿ ನಾಯಕ
ರೂಪೇಶ್ | Photo: newindianexpress.com
ಕೋಝಿಕ್ಕೋಡ್: ವಿಯ್ಯೂರ್ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸದಲ್ಲಿರುವ ಮಾವೋವಾದಿ ನಾಯಕ ರೂಪೇಶ್, ತಮ್ಮ ಎರಡನೆ ಕಾದಂಬರಿಯ ಪ್ರಕಟನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ, ಮಾರ್ಚ್ 2ರಿಂದ ಆಮರಣಾಂತ ಉಪವಾಸ ಕೈಗೊಳ್ಳಲು ಮುಂದಾಗಿದ್ದಾರೆ.
ತುರ್ತು ಪರಿಸ್ಥಿತಿಯ ವೇಳೆ ಪೊಲೀಸರ ವಶದಲ್ಲಿ ಮೃತಪಟ್ಟಿದ್ದ ಕ್ಯಾಲಿಕಟ್ ನ ರೀಜನಲ್ ಇಂಜಿನಿಯರಿಂಗ್ ಕಾಲೇಜು (ಇದೀಗ ಎನ್ಐಟಿಸಿ) ವಿದ್ಯಾರ್ಥಿ ರಾಜನ್ ಬಲಿದಾನದ ಸ್ಮರಣಾರ್ಥವಾಗಿ ಮಾರ್ಚ್ 2ರಂದು ಆಮರಣಾಂತ ಉಪವಾಸ ಕೈಗೊಳ್ಳಲು ರೂಪೇಶ್ ನಿರ್ಧರಿಸಿದ್ದಾರೆ ಎಂದು ಅವರ ಪತ್ನಿ ಪಿ.ಎ.ಶೈನಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶೈನಾ, “ರೂಪೇಶ್ ತಮ್ಮ ಕಾದಂಬರಿ ‘ಬಂಧಿತರುಡೆ ಒರ್ಮಕ್ಕುರಿಪ್ಪುಕಲ್’ (ಕೈದಿಗಳ ನೆನಪುಗಳು) ಪ್ರಕಟಿಸಲು ಜೈಲು ಅಧಿಕಾರಿಗಳ ಅನುಮತಿ ಕೋರಿದ್ದರು. ಆದರೆ, ಕಾದಂಬರಿಯು ಜೈಲು, ಯುಎಪಿಎ ಕಾಯ್ದೆ ಹಾಗೂ ನ್ಯಾಯಾಲಯದ ಉಲ್ಲೇಖಗಳನ್ನು ಒಳಗೊಂಡಿರುವುದರಿಂದ, ಕಾದಂಬರಿ ಪ್ರಕಟನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅವರು ನಮಗೆ ಮೌಖಿಕವಾಗಿ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
“ಕಾದಂಬರಿಯಲ್ಲಿ ಇವುಗಳ ಕುರಿತು ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ. ಆದರೆ, ಖಂಡಿತವಾಗಿ ದೇಶದಲ್ಲಿ ಚಾಲ್ತಿಯಲ್ಲಿರುವ ವ್ಯವಸ್ಥೆಯ ಬಗ್ಗೆ ಅದು ಪ್ರಶ್ನೆಗಳನ್ನೆತ್ತುತ್ತದೆ. ನಾವು ಕಾದಂಬರಿಯ ಹಸ್ತಪ್ರತಿಯನ್ನು ಕೇರಳದ ಹಲವಾರು ಖ್ಯಾತ ಲೇಖಕರಿಗೆ ಸಲ್ಲಿಸಿದ್ದು, ಅವರೆಲ್ಲ ಕಾದಂಬರಿಯ ಕಲಾತ್ಮಕ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
2015ರಲ್ಲಿ ಬಂಧಿತರಾಗಿದ್ದ ರೂಪೇಶ್, ಜೈಲಿನಲ್ಲಿರುವಾಗಲೇ ಇತಿಹಾಸದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು.
2013ರಲ್ಲಿ ಭೂಗತರಾಗಿದ್ದಾಗ ರೂಪೇಶ್ ಬರೆದಿದ್ದ ಪ್ರಥಮ ಕಾದಂಬರಿ ‘ವಸಂತತಿಂತೆ ಪೂಮರಂಗಳ್’ ವ್ಯಾಪಕ ಚರ್ಚೆಗೊಳಗಾಗಿತ್ತು.
“ಸದ್ಯ ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಮೊಬೈಲ್ ರಿಪೇರಿ, ಆಟೊಮೊಬೈಲ್ ಹಾಗೂ ಬ್ಯಾಂಕಿಂಗ್ ವಿಷಯಗಳಲ್ಲೂ ಕಿರು ಅವಧಿಯ ಕೋರ್ಸ್ ಗಳನ್ನು ಮಾಡಿದ್ದಾರೆ. ಅವರು ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಳಲ್ಲೂ ಪಾಲ್ಗೊಂಡಿದ್ದು, ಜೈಲಿನ ರೇಡಿಯೊ ಹಾಗೂ ಕಿರುಚಿತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಶೈನಾ ಹೇಳಿದ್ದಾರೆ.
“ಪುಸ್ತಕಗಳನ್ನು ಪ್ರಕಟಿಸುವ ಕೈದಿಗಳ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೈದಿಯು ಹಸ್ತಪ್ರತಿಯನ್ನು ತನ್ನ ಪತ್ನಿಗೆ ಹಸ್ತಾಂತರಿಸುವುದಕ್ಕೆ ಅನುಮತಿ ನಿರಾಕರಿಸುವುದು ಕಾನೂನು ಬಾಹಿರ ಎಂದು 1986ರಲ್ಲಿ ನ್ಯಾಯಾಲಯ ಘೋಷಿಸಿತ್ತು. ಇಂತಹ ಇನ್ನೂ ಹಲವಾರು ಪ್ರಕರಣಗಳಿವೆ” ಎಂದು ಅವರು ತಿಳಿಸಿದ್ದಾರೆ.
ಮೇ 4, 2015ರಲ್ಲಿ ಶೈನಾ ಹಾಗೂ ಇನ್ನಿತರ ಮೂರು ಮಂದಿಯೊಂದಿಗೆ ರೂಪೇಶ್ ರನ್ನು ಕೊಯಂಬತ್ತೂರಿನ ಕರುಮತಂಪಟ್ಟಿಯಲ್ಲಿ ಬಂಧಿಸಲಾಗಿತ್ತು. ಈ ಪೈಕಿ ರೂಪೇಶ್ ಹೊರತುಪಡಿಸಿ ಉಳಿದೆಲ್ಲರೂ ಬಿಡುಗಡೆಗೊಂಡಿದ್ದರು. ಅವರ ವಿರುದ್ಧ ಕೇರಳ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 43 ಪ್ರಕರಣಗಳು ದಾಖಲಾಗಿವೆ.
ಸೌಜನ್ಯ: newindianexpress.com