×
Ad

ರಶ್ಯ ತೈಲ ಖರೀದಿ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕ: ಜೈಶಂಕರ್

Update: 2025-08-21 20:37 IST

ಎಸ್. ಜೈಶಂಕರ್ | PC :  PTI

ಮಾಸ್ಕೊ, ಆ. 21: ರಶ್ಯದಿಂದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಮಾತ್ರವಲ್ಲ, ಅಮೆರಿಕ ಪ್ರತಿಪಾದಿಸಿರುವಂತೆ ‘‘ಜಾಗತಿಕ ಇಂಧನ ಮಾರುಕಟ್ಟೆ’’ಯನ್ನು ಸ್ಥಿರಗೊಳಿಸುವ ನೀತಿಯನ್ನೂ ಬೆಂಬಲಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಹೇಳಿದ್ದಾರೆ.

‘‘ರಶ್ಯದಿಂದ ತೈಲ ಖರೀದಿಸುವುದು ಸೇರಿದಂತೆ ಜಾಗತಿಕ ಇಂಧನ ಮಾರುಕಟ್ಟೆಗೆ ಸ್ಥಿರತೆ ಒದಗಿಸಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡಬೇಕು ಎಂಬುದಾಗಿ ಅಮೆರಿಕನ್ನರು ಕೆಲವು ವರ್ಷಗಳಿಂದ ಹೇಳುತ್ತಿದ್ದಾರೆ’’ ಎಂದು ಮಾಸ್ಕೊದಲ್ಲಿ ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್ ಹೇಳಿದರು.

ಭಾರತವು ಅಮೆರಿಕದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದು ಇತ್ತೀಚೆಗೆ ಹೆಚ್ಚಾಗಿದೆ ಎಂಬುದಾಗಿಯೂ ಅವರು ತಿಳಿಸಿದರು. ‘‘ಹಾಗಾಗಿ, ಈ ವಾದದ ತರ್ಕವು ನಮಗೆ ಅರ್ಥವಾಗುತ್ತಿಲ್ಲ ಎನ್ನುವುದನ್ನು ನಾವು ಪ್ರಾಮಾಣಿಕವಾಗಿ ಹೇಳಬೇಕಾಗಿದೆ’’ ಎಂದರು. ಭಾರತವು ರಶ್ಯ ತೈಲದ ಬೃಹತ್ ಖರೀದಿದಾರ ಎಂಬ ಆರೋಪಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಚೀನಾ, ಐರೋಪ್ಯ ಒಕ್ಕೂಟ ಮತ್ತು ಇತರ ಹಲವಾರು ದೇಶಗಳು ರಶ್ಯದೊಂದಿಗೆ ಹೆಚ್ಚಿನ ಇಂಧನ ವ್ಯವಹಾರಗಳನ್ನು ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟರು. ‘‘ನಾವು ರಶ್ಯ ತೈಲದ ಅತಿ ದೊಡ್ಡ ಖರೀದಿದಾರರಲ್ಲ, ಅದು ಚೀನಾ. ನಾವು ಎಲ್‌ಎನ್‌ಜಿಯಯ ಅತಿ ದೊಡ್ಡ ಆಮದುಗಾರರರಲ್ಲ, ಅದು ಐರೋಪ್ಯ ಒಕ್ಕೂಟ’’ ಎಂದು ಅವರು ಹೇಳಿದರು.

‘‘2022ರ ಬಳಿಕ, ರಶ್ಯದೊಂದಿಗೆ ವ್ಯಾಪಾರವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಿಕೊಂಡವರು ನಾವಲ್ಲ, ಅದು, ನನ್ನ ಪ್ರಕಾರ ದಕ್ಷಿಣದ ಕೆಲವು ದೇಶಗಳು’’ ಎಂದರು.

ರಶ್ಯ ಭೇಟಿಯ ವೇಳೆ, ಜೈಶಂಕರ್ ಆ ದೇಶದ ವಿದೇಶ ಸಚಿವ ಲವ್ರೊವ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯಗಳ ಬಗ್ಗೆ ಚರ್ಚಿಸಿದರು. ಈ ವರ್ಷದ ಕೊನೆಯಲ್ಲಿ ನಡೆಯಲು ನಿಗದಿಯಾಗಿರುವ ವಾರ್ಷಿಕ ಭಾರತ-ರಶ್ಯ ಶೃಂಗಸಮ್ಮೇಳನದ ಬಗ್ಗೆಯೂ ಅವರು ಚರ್ಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News