×
Ad

ಜಮ್ಮು-ಕಾಶ್ಮೀರಕ್ಕೆ ಅರೆ ಸೈನಿಕ ಪಡೆಗಳ ನಿಯೋಜನೆ

Update: 2024-09-05 20:31 IST

ಸಾಂದರ್ಭಿಕ ಚಿತ್ರ | PC : NDTV 

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ದಶಕದ ಅವಧಿಯಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ, ಕೇಂದ್ರ ಸರಕಾರವು ರಾಜ್ಯದಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸುತ್ತಿದೆ. ವಿಶೇಷವಾಗಿ, ಗುಡ್ಡಗಾಡು ಜಮ್ಮು ವಲಯದಲ್ಲಿ ಜೂನ್ ತಿಂಗಳಿನಿಂದೀಚೆಗೆ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿದೆ.

ಈ ವರ್ಷದ ಮಾರ್ಚ್- ಎಪ್ರಿಲ್‌ನಲ್ಲಿ, 60ರಿಂದ 80 ಭಯೋತ್ಪಾದಕರು ಜಮ್ಮು ವಲಯಕ್ಕೆ ನುಸುಳಿದ್ದಾರೆ ಎಂದು ಭಾವಿಸಲಾಗಿದೆ. ಇನ್ನಷ್ಟು ಭಯೋತ್ಪಾದಕರನ್ನು ನುಗ್ಗಿಸಲು ಪಾಕಿಸ್ತಾನ ಉದ್ದೇಶಿಸಿದೆ ಎನ್ನಲಾಗಿದ್ದು, ಭದ್ರತಾ ಪಡೆಗಳು ಪೂರ್ಣ ಪ್ರಮಾಣದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿವೆ.

‘‘2020 ಜೂನ್ 15ರಂದು ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಚೀನೀ ಸೈನಿಕರು ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ನಡೆದ ಬಳಿಕ ಜಮ್ಮು ವಲಯದಿಂದ ಸೈನಿಕರನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಈಗ ಆ ಅಂತರವನ್ನು ಮುಚ್ಚುವುದಕ್ಕಾಗಿ 500 ಪ್ಯಾರಾ ಕಮಾಂಡೊಗಳು ಸೇರಿದಂತೆ ಹೆಚ್ಚುವರಿ 3,000 ಪಡೆಗಳನ್ನು ಸೇನೆಯು ನಿಯೋಜಿಸಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯು ತನ್ನ 2000 ಯೋಧರನ್ನು ಒಡಿಶಾದಿಂದ ಜಮ್ಮುವಿನ ಅಂತರ್‌ರಾಷ್ಟ್ರೀಯ ಗಡಿಗೆ ಕಳುಹಿಸಿದೆ. ಮಣಿಪುರದಲ್ಲಿದ್ದ ಅಸ್ಸಾಮ್ ರೈಫಲ್ಸ್‌ನ ಸುಮಾರು 2,000 ಸಿಬ್ಬಂದಿಯನ್ನು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ನಿಯೋಜಿಸಲಾಗಿದೆ. ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆಯನ್ನು ತಡೆಯುವುದು ಮತ್ತು ಈಗಾಗಲೇ ಒಳಗೆ ನುಸುಳಿರುವ ಭಯೋತ್ಪಾದಕರನ್ನು ನಿಗ್ರಹಿಸುವುದು ಇದರ ಉದ್ದೇಶವಾಗಿದೆ’’ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News