ಜಮ್ಮುಕಾಶ್ಮೀರದ ಗ್ರಾಮದಲ್ಲಿ ನಿಗೂಢ ಕಾಯಿಲೆಗೆ ಮೂರು ಕುಟುಂಬಗಳ 16 ಜೀವಗಳು ಬಲಿ
PC : ANI
ಶ್ರೀನಗರ : ಜಮ್ಮುಕಾಶ್ಮೀರದ ಗಡಿಜಿಲ್ಲೆ ರಾಜೌರಿಯ ಬುಧಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೂರು ಕುಟುಂಬಗಳಿಗೆ ಸೇರಿದ 16 ಜನರು ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ 2024,ಡಿ.7ರಿಂದ ಸಾವುಗಳ ಸರಮಾಲೆ ಆರಂಭಗೊಂಡಿದೆ. ಸಮುದಾಯ ಭೋಜನವನ್ನು ಸ್ವೀಕರಿಸಿದ ಬಳಿಕ ಅಸ್ವಸ್ಥಗೊಂಡಿದ್ದ ಮುಹಮ್ಮದ್ ಫಜಲ್ ಮತ್ತು ಅವರ ನಾಲ್ವರು ಮಕ್ಕಳು ಡಿ.7ರಂದು ಕೊನೆಯುಸಿರೆಳೆದಿದ್ದು ಸರಣಿ ಸಾವುಗಳಿಗೆ ನಾಂದಿ ಹಾಡಿತ್ತು.
ಐದು ದಿನಗಳ ಬಳಿಕ ಡಿ.12ರಂದು ಗ್ರಾಮದ ಮುಹಮ್ಮದ್ ರಫೀಕ್ ನಿಗೂಢ ಕಾಯಿಲೆಯಿಂದಾಗಿ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕಳೆದುಕೊಂಡಿದ್ದರು.
ಜ.9ರಂದು ಮುಹಮ್ಮದ್ ಅಸ್ಲಂ ಅವರ ಆರು ಮಕ್ಕಳು ಕಾಯಿಲೆಗೆ ತುತ್ತಾಗಿದ್ದು,ಈವರೆಗೆ ಐವರು ಸಾವನ್ನಪ್ಪಿದ್ದಾರೆ. ಅಸ್ಲಂ ಜೊತೆಗೆ ವಾಸವಿದ್ದ ಸೋದರಮಾವ ಮುಹಮ್ಮದ್ ಯೂಸುಫ್ ಗುರುವಾರ ಮೃತಪಟ್ಟಿದ್ದರೆ,ಅವರ ಪತ್ನಿ ಜಟ್ಟಿ ಬೇಗಂ ಶುಕ್ರವಾರ ಬೆಳಿಗ್ಗೆ ನಿಗೂಢ ಕಾಯಿಲೆಯಿಂದಾಗಿ ಜೀವ ಚೆಲ್ಲಿದ್ದಾರೆ.
ಈ ಮೂರೂ ಕುಟುಂಬಗಳು ಪರಸ್ಪರ ಸಂಬಂಧ ಹೊಂದಿದ್ದು,ಒಂದೂವರೆ ಕಿ.ಮೀ.ಅಂತರದಲ್ಲಿ ವಾಸವಿದ್ದಾರೆ.
‘ಒಂದೇ ವಾರದಲ್ಲಿ ನನ್ನ ಜಗತ್ತೇ ನಾಶಗೊಂಡಿದೆ. ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಐವರು ಮಕ್ಕಳನ್ನು ನಾನು ಕಳೆದುಕೊಂಡಿದ್ದೇನೆ. ಬದುಕಿರುವ ಏಕೈಕ ಪುತ್ರಿ ಯಾಸ್ಮಿನ್ ಕೌಂಸರ್(15) ಜಮ್ಮುವಿನ ಎಸ್‌ಎಂಜಿಎಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಆಕೆ ಉಳಿಯುತ್ತಾಳೋ ಇಲ್ಲವೋ ಎನ್ನುವುದು ನಮಗೆ ಗೊತ್ತಿಲ್ಲ. ಆಕೆಯ ಜೀವವನ್ನು ಉಳಿಸುವಂತೆ ನಾವು ದೇವರನ್ನು ಪ್ರಾರ್ಥಿಸುತ್ತಿದ್ದೇವೆ. ಯಾಸ್ಮಿನ್‌ಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ಅಸ್ಲಂ ನೋವು ತೋಡಿಕೊಂಡರು.
‘ಡಿ.7ರಂದು ಫಝಲ್ ಮನೆಯಲ್ಲಿ ಸುಮಾರು 30-40 ಜನರು ಊಟ ಮಾಡಿದ್ದರು,ಆದರೆ ಕೇವಲ ಮೂರು ಕುಟುಂಬಗಳು ಕಾಯಿಲೆಗೆ ತುತ್ತಾಗಿದ್ದು ಹೇಗೆ ಎನ್ನುವುದು ಅರ್ಥವಾಗುತ್ತಿಲ್ಲ. ನನ್ನ ಮೂವರು ಮಕ್ಕಳು ಮನೆಯಲ್ಲಿಯೇ ಇದ್ದು,ಫಝಲ್ ಮನೆಯಲ್ಲಿ ಊಟ ಮಾಡಿರಲಿಲ್ಲ. ಹಾಗಿದ್ದರೂ ಅವರು ಕಾಯಿಲೆಗೆ ಬಲಿಯಾಗಿದ್ದರೆ. ಏನಾಗುತ್ತಿದೆ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ. ಸೂಕ್ತ ವೈದ್ಯಕೀಯ ನೆರವು ಮತ್ತು ಸತ್ಯವನ್ನು ಬಯಲಿಗೆಳೆಯಲು ಪೋಲಿಸ್ ತನಿಖೆಯ ಅಗತ್ಯವಿದೆ’ಎಂದರು.
ಈವರೆಗೆ ನಾಲ್ವರು ವಯಸ್ಕರು ಮತ್ತು 12 ಮಕ್ಕಳು ಮೃತಪಟ್ಟಿದ್ದು,ನಿಗೂಢ ಕಾಯಿಲೆಯು ಗ್ರಾಮದಲ್ಲಿ ಭೀತಿಯನ್ನು ಸೃಷ್ಟಿಸಿದೆ. ಗ್ರಾಮಸ್ಥರು ತಮ್ಮ ಆರೋಗ್ಯದ ಬಗ್ಗೆ ತೀವ್ರ ಚಿಂತೆಗೊಳಗಾಗಿದ್ದಾರೆ.
ವಿವಿಧ ಏಜೆನ್ಸಿಗಳು ಗ್ರಾಮದಿಂದ ಸಾವಿರಾರು ಸ್ಯಾಂಪಲ್‌ಗಳನ್ನು ಸಂಗ್ರಹಿಸಿವೆ. ವೈರಾಣುಗಳಿಗಾಗಿ ನಡೆಸಿದ ಪರೀಕ್ಷೆಗಳಲ್ಲಿ ಎಲ್ಲ ಸ್ಯಾಂಪಲ್‌ಗಳೂ ನೆಗೆಟಿವ್ ವರದಿಯನ್ನು ನೀಡಿವೆ. ದೇಶದ ಕೆಲವು ಅತ್ಯಂತ ಪ್ರತಿಷ್ಠಿತ ಪ್ರಯೋಗಾಲಯಗಳಲ್ಲಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದ ಅಧಿಕೃತ ವಕ್ತಾರರು,ಇದು ಸಾಂಕ್ರಾಮಿಕ ರೋಗವಲ್ಲ ಎನ್ನುವುದನ್ನು ಪರೀಕ್ಷೆಗಳು ದೃಢ ಪಡಿಸಿವೆ ಎಂದರು.
ಇದು ಸಾಂಕ್ರಾಮಿಕ ರೋಗವಲ್ಲ ಎಂದು ಸರಕಾರವು ಹೇಳುತ್ತಿದ್ದರೆ ಅದು ಸಾವುಗಳ ಕಾರಣಗಳನ್ನು ತಿಳಿದುಕೊಳ್ಳಲು ತನಿಖೆ ನಡೆಸಬೇಕು. 45 ದಿನಗಳು ಮತ್ತು 16 ಸಾವುಗಳಿಗಾಗಿ ಕಾಯುವ ಬದಲು ಮೊದಲ ಸಾವುಗಳು ಸಂಭವಿಸಿದ ಕೂಡಲೇ ತನಿಖೆಯನ್ನು ಆರಂಭಿಸಬೇಕಿತ್ತು ಎಂದು ಸರಕಾರವು ಕೈಗೊಂಡಿರುವ ಪೋಲಿಸ್ ತನಿಖೆಯನ್ನು ಉಲ್ಲೇಖಿಸಿ ಅಸ್ಲಂ ಹೇಳಿದರು.
ಈ ನಡುವೆ ಶನಿವಾರ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬುಧಾಲ್ ಗ್ರಾಮದಲ್ಲಿಯ ಸ್ಥಿತಿಯ ಕುರಿತು ಚರ್ಚಿಸಲಾಗಿದೆ.