×
Ad

ಜಮ್ಮುಕಾಶ್ಮೀರ: ನಿಗೂಢ ಸಾವಿನ ಪ್ರಕರಣ ; ಅಂತರ್‌ ಸಚಿವಾಲಯ ತಂಡದಿಂದ ತನಿಖೆ ಆರಂಭ

Update: 2025-01-21 20:20 IST

PC : PTI

ಶ್ರೀನಗರ: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯ ಬುಧಲ್ ಗ್ರಾಮದಲ್ಲಿ 17 ಮಂದಿ ನಾಗರಿಕರು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ರಚಿಸಿರುವ ಅಂತರ್ ಸಚಿವಾಲಯ ತಂಡ ಆರಂಭಿಸಿದೆ.

ಗ್ರಾಮಸ್ಥರ ಸಾವಿಗೆ ಕಾರಣಗಳನ್ನು ಸ್ಪಷ್ಟಪಡಿಸಿಕೊಳ್ಳಲು ಪರೀಕ್ಷೆಗಾಗಿ ವಿವಿಧ ಮಾದರಿಗಳನ್ನು ಸಂಗ್ರಹಿಸಲಾಗಿದೆಯೆಂದು ರಜೌರಿಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನೊಳಗೊಂಡ ತಂಡವು ಮಂಗಳವಾರ ಬೆಳಗ್ಗೆ 11:30ರ ವೇಳೆಗೆ ಬುಧಲ್ ಗ್ರಾಮವನ್ನು ತಲುಪಿದ್ದು, ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಯಿತೆಂದು ಮೂಲಗಳು ತಿಳಿಸಿವೆ.

ಗ್ರಾಮದ ಬಾವಿಯೊಂದರ ನೀರಿನಲ್ಲಿ ಕೀಟನಾಶಕದ ಅಂಶಗಳಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟ ಬಳಿಕ ಅದಕ್ಕೆ ಬೀಗಮುದ್ರೆ ಹಾಕಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಬುಧಲ್ ಗ್ರಾಮಕ್ಕೆ ಟ್ಯಾಂಕರುಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದವರು ಹೇಳಿದ್ದಾರೆ.

ರಜೌರಿ ಜಿಲ್ಲೆಗೆ ಭೇಟಿ ನೀಡಿರುವ ಅಂತರ್ ಸಚಿವಾಲಯ ತಂಡವು ದೇಶದ ಅತ್ಯುನ್ನತ ಸಂಸ್ಥೆಗಳ ತಜ್ಞರನ್ನು ಒಳಗೊಂಡಿದೆ. ಕೇಂದ್ರ ಗೃಹ ಸಚಿವಾಲಯ ಮಧ್ಯಪ್ರವೇಶಿಸಿದ ಬಳಿಕ ಬುಧಲ್ ಗ್ರಾಮಸ್ಥರ ನಿಗೂಢ ಸಾವಿನ ಕಾರಣವನ್ನು ಪತ್ತೆಹಚ್ಚಲು ತಂಡವನ್ನು ರಚಿಸಲಾಗಿತ್ತು.

2024ರ ಡಿಸೆಂಬರ್‌ನಲ್ಲಿ ಬುಧಲ್‌ಗ್ರಾಮದಲ್ಲಿ ನಿಗೂಢ ಸಾವಿನ ಪ್ರಥಮ ಪ್ರಕರಣವು ವರದಿಯಾಗಿತ್ತು. ಮಕ್ಕಳು ಹಾಗೂ ಅವರ ತಂದೆ ಸೇರಿದಂತೆ ಕುಟುಂಬವೊಂದರ ಹಲವು ಸದಸ್ಯರು ಸಾವನ್ನಪ್ಪುವ ಮುನ್ನ ಜ್ವರ, ವಾಂತಿ, ನಿರ್ಜಲೀಕರಣ, ಬೆವರುವಿಕೆ ಹಾಗೂ ಪದೇ ಪದೇ ಪ್ರಜ್ಞೆ ತಪ್ಪುವಂತಹ ಅಸ್ವಸ್ಥತೆಯ ಲಕ್ಷಣಗಳನ್ನು ಪ್ರದರ್ಶಿಸಿದ್ದರು. ಆನಂತರ ಆ ಗ್ರಾಮದ ಇನ್ನೊಂದು ಕುಟುಂಬದ ಸದಸ್ಯರು ಕೂಡಾ ಇಂತಹದೇ ಅನಾರೋಗ್ಯದ ಲಕ್ಷಣಗಳನ್ನು ಪ್ರದರ್ಶಿಸಿದ ಬಳಿಕ ಮೃತಪಟ್ಟಿದ್ದರು.

40 ದಿನಗಳ ಬಳಿಕ, ಬುಧಲ್ ಗ್ರಾಮದಲ್ಲಿ ನಿಗೂಢ ಸಾವಿನ ಸರಣಿ ಮತ್ತೆ ಆರಂಭಗೊಂಡಿತು. ಈ ಮೊದಲು ಮೃತಪಟ್ಟ ವ್ಯಕ್ತಿಯೊಬ್ಬರ ಸಾವಿನ 40ನೇ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಆತನ ಸೋದರಿಯ ಕುಟುಂಬಿಕರು ಭೋಜನ ಸೇವಿಸಿದ ಬಳಿಕ ಅಸ್ವಸ್ಥಗೊಂಡು, ಸಾವಿಗೀಡಾಗಿದ್ದರು.

ಪುಣೆ ವೈರಾಣುಶಾಸ್ತ್ರ ಸಂಸ್ಥೆ, ಡಿಆರ್‌ಡಿಓ ಹಾಗೂ ಜಮ್ಮು ಮೆಡಿಕಲ್ ಕಾಲೇಜಿನ ತಂಡಗಳು ತನಿಖೆ ನಡೆಸಿದ ಹೊರತಾಗಿಯೂ ಸಾವಿನ ನೈಜ ಕಾರಣವನ್ನು ಈವರೆಗೆ ಗುರುತಿಸಲಾಗಿಲ್ಲ. ಜಮ್ಮುಕಾಶ್ಮೀರದ ಆರೋಗ್ಯ ಸಚಿವ ಸಕೀನಾ ಇಟ್ಲೂ ಅವರು ಕೂಡಾ ಗ್ರಾಮಸ್ಥರ ನಿಗೂಢ ಸಾವಿಗೆ ಸೋಂಕುರೋಗ ಕಾರಣವೆಂಬುದನ್ನು ನಿರಾಕರಿಸಿದ್ದಾರೆ.

ಗ್ರಾಮಸ್ಥರ ಸಾವಿನ ಪ್ರಕರಣಗಳ ಹಿಂದಿರುವ ಇತರ ಸಂಭಾವ್ಯ ಕಾರಣಗಳ ಬಗ್ಗೆ ತನಿಖೆ ನಡೆಸಲು 11 ಸದಸ್ಯರ ವಿಶೇಷ ತನಿಖಾ ತಂಡವನ್ನು ಜಮ್ಮುಕಾಶ್ಮೀರ ಪೊಲೀಸರು ಸ್ಥಾಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News