ಜಮ್ಮ-ಕಾಶ್ಮೀರ: ಪೊಲೀಸ್ ಕಸ್ಟಡಿಯಲ್ಲಿ ಯುವಕ ಮೃತ್ಯು; ತನಿಖೆಗೆ ಆದೇಶಿಸಿದ ಮ್ಯಾಜಿಸ್ಟ್ರೇಟ್
ಸಾಂದರ್ಭಿಕ ಚಿತ್ರ
ಜಮ್ಮು : ಜಮ್ಮು ಹಾಗೂ ಕಾಶ್ಮೀರದ ರಾಂಬಾನ್ ಜಿಲ್ಲೆಯಲ್ಲಿ ಯುವಕನೋರ್ವ ಪೊಲೀಸ್ ಕಸ್ಟಡಿಯಲ್ಲಿ ಅನಾರೋಗ್ಯಕ್ಕೆ ತುತ್ತಾದ ಬಳಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾನೆ.
ಮೃತಪಟ್ಟ ಯುವಕನನ್ನು ಮುಹಮ್ಮದ್ ಅಬೀದ್ (27) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಟೋಟೆಯ ತೋಪಾಲ್ ಗ್ರಾಮದ ನಿವಾಸಿ ಮುಹಮ್ಮದ್ ಅಬೀದ್ ಸಾವಿನ ಹಿನ್ನೆಲೆಯಲ್ಲಿ ರಾಂಬಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಬಶೀರ್ ಉಲ್ ಹಕ್ ಚೌಧರಿ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಈ ತನಿಖೆ ಪೂರ್ಣಗೊಳಿಸಲು ಮೂರು ವಾರಗಳ ಕಾಲಾವಕಾಶ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಅಬಿದ್‌ನನ್ನು ಪೊಲೀಸರು ಕರೆದೊಯ್ದಿದ್ದರು. ಅಬೀದ್ ಲಾಕಪ್ ನಲ್ಲಿ ಮಂಗಳವಾರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಬಟೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬಿದ್ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಸ್ಗರ್ ಅವರನ್ನು ನೇಮಿಸಿದ್ದಾರೆ.
‘‘ವಿಚಾರಣಾ ಅಧಿಕಾರಿಯು ಅಬೀದ್‌ನ ಸಾವಿಗೆ ಕಾರಣ ಹಾಗೂ ಸಂದರ್ಭಗಳನ್ನು ಪರಿಶೀಲಿಸಬೇಕು ಹಾಗೂ ಹೊಣೆಗಾರರನ್ನು ನಿರ್ಧರಿಸಬೇಕು. ಅಲ್ಲದೆ, ಒಂದು ವಾರಗಳ ಒಳಗೆ ವರದಿ ಸಲ್ಲಿಸಬೇಕು’’ ಎಂದು ಮಂಗಳವಾರ ಸಂಜೆ ನೀಡಿದ ಆದೇಶದಲ್ಲಿ ಚೌಧರಿ ಹೇಳಿದ್ದಾರೆ.