ಜಮ್ಮುಕಾಶ್ಮೀರ | ನಾಪತ್ತೆಯಾದ ಮೂವರ ಮೃತದೇಹ ಪತ್ತೆ
ಶ್ರೀನಗರ : ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ನಾಗರಿಕರ ಮೃತದೇಹ ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.
ಭದ್ರತಾ ಪಡೆ ಡ್ರೋನ್ ಬಳಸಿ ಎತ್ತರದ ಪ್ರದೇಶದ ಜಲಪಾತವೊಂದರಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚಿದೆ. ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕಾರಣ ದೃಢಪಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂವರು ನಾಗರಿಕರು ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಅವರನ್ನು ಪತ್ತೆ ಹಚ್ಚಲು ಕಥುವಾ ಜಿಲ್ಲೆಯ ಲೊಹಾಯಿ ಮಲ್ಹಾರ್ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಾರತೀಯ ಸೇನೆ ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ಗುಂಪಿನೊಂದಿಗೆ (ಎಸ್‌ಒಜಿ) ಜಂಟಿ ಕಾರ್ಯಾಚರಣೆ ಆರಂಭಿಸಿತ್ತು.
ಈ ಮೂವರು ನಾಗರಿಕರು ಗುರುವಾರ ರಾತ್ರಿ 8.30ಕ್ಕೆ ನಾಪತ್ತೆಯಾಗಿದ್ದರು ಬಿಲ್ಲಾವರ್ ಪ್ರದೇಶದಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಇವರು ಮನೆಯಿಂದ ಹೊರಟಿದ್ದರು ಎಂದು ಈ ಪ್ರದೇಶದ ನಾಗರಿಕರು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ನಾಗರಿಕರನ್ನು ಮರ್ಹೂನ್ ಗ್ರಾಮದ ಜೋಗೇಶ್ ಸಿಂಗ್ (35), ದೆಹೋಟಾ ಗ್ರಾಮದ ದರ್ಶನ್ ಸಿಂಗ್ (40) ಹಾಗೂ ಬಿಲ್ಲಾವರ್ ತಾಲೂಕಿನ ದೆಹೋಟಾ ಗ್ರಾಮದ ಬರೂನ್ ಸಿಂಗ್ (14) ಎಂದು ಗುರುತಿಸಲಾಗಿದೆ.