ಜಮ್ಮು-ಕಾಶ್ಮೀರ | ಶಾಲೆ ಮೇಲೆ ಉರುಳಿ ಬಿದ್ದ ಬಂಡೆ; ಓರ್ವ ವಿದ್ಯಾರ್ಥಿ ಮೃತ್ಯು, ಐವರ ಸ್ಥಿತಿ ಗಂಭೀರ
Update: 2025-07-21 20:23 IST
ಸಾಂದರ್ಭಿಕ ಚಿತ್ರ
ಜಮ್ಮು: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಇಲ್ಲಿನ ಸರಕಾರಿ ಶಾಲೆಯ ಮೇಲೆ ಸೋಮವಾರ ಭೂಕುಸಿತ ಸಂಭವಿಸಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಹಾಗೂ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭೈಂಚ್-ಕಾಲ್ಸಿಯಾನ್ ಪ್ರದೇಶದಲ್ಲಿರುವ ಪ್ರಾಥಮಿಕ ಶಾಲೆಯ ತಗಡಿನ ಛಾವಣಿಯ ಮೇಲೆ ದೊಡ್ಡ ಬಂಡೆಯೊಂದು ಉರುಳಿ ಬಿತ್ತು. ಇದರಿಂದ ವಿದ್ಯಾರ್ಥಿ ಎಹ್ಸಾನ್ ಅಲಿ (5) ಮೃತಪಟ್ಟಿದ್ದಾನೆ. ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಪೂಂಛ್‌ನಲ್ಲಿರುವ ರಾಜಾ ಸುಖ್ ದೇವ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದುರ್ಘಟನೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿರುವ ಕುರಿತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.