ಜಮ್ಮು-ಕಾಶ್ಮೀರ: 12 ಪ್ರವಾಸಿ ಸ್ಥಳಗಳ ಮರು ಆರಂಭ
ಸಾಂದರ್ಭಿಕ ಚಿತ್ರ | Credit : PTI
ಶ್ರೀನಗರ, ಸೆ. 29: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಮುಚ್ಚಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ಸುಮಾರು 12 ಪ್ರವಾಸಿ ಸ್ಥಳಗಳನ್ನು ಸೋಮವಾರ ವಿಸ್ತೃತ ಭದ್ರತಾ ಪರಿಶೀಲನೆಯ ಬಳಿಕ ಪ್ರವಾಸಿಗಳಿಗೆ ತೆರೆಯಲಾಗಿದೆ.
ಎಪ್ರಿಲ್ ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯ ಬಳಿಕ, ಜಮ್ಮು ಮತ್ತು ಕಾಶ್ಮೀರ ಸರಕಾರವು ಭದ್ರತಾ ಕಾರಣಗಳಿಗಾಗಿ ಸುಮಾರು 50 ಪ್ರವಾಸಿ ಸ್ಥಳಗಳನ್ನು ಮುಚ್ಚಿತ್ತು.
ಶ್ರೀನಗರದಲ್ಲಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ಏಕೀಕೃತ ಪ್ರಧಾನಕಚೇರಿ ಸಭೆಯಲ್ಲಿ ಕಾಶ್ಮೀರದ ಏಳು ಮತ್ತು ಜಮ್ಮುನ ಐದು ಪ್ರವಾಸಿ ಸ್ಥಳಗಳ ಮರು ಆರಂಭಕ್ಕೆ ಭದ್ರತಾ ಪರವಾನಿಗೆ ನೀಡಲಾಯಿತು.
‘‘ಇಂದಿನ ಸಭೆಯಲ್ಲಿ ನಡೆದ ವಿವರವಾದ ಭದ್ರತಾ ಪರಿಶೀಲನೆ ಮತ್ತು ಚರ್ಚೆಯ ಬಳಿಕ, ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿನ ಹೆಚ್ಚಿನ ಪ್ರವಾಸಿ ಸ್ಥಳಗಳ ಮರು ಆರಂಭಕ್ಕೆ ನಾನು ಆದೇಶ ನೀಡಿದ್ದೇನೆ. ಅವುಗಳನ್ನು ಮುನ್ಚೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು’’ ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.