ಜಮ್ಮುಕಾಶ್ಮೀರ | ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ನೆರವಾಗಿದ್ದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಶ್ರೀನಗರ,ಅ.5: ಎ.22ರ ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ನೆರವಾಗಿದ್ದ ಆರೋಪದಲ್ಲಿ ಮುಹಮ್ಮದ್ ಯೂಸುಫ್ ಕಟಾರಿ(26) ಎಂಬಾತನನ್ನು ಜಮ್ಮುಕಾಶ್ಮೀರ ಪೋಲಿಸರು ಬಂಧಿಸಿದ್ದಾರೆ.
ಈತ ನಾಲ್ಕು ಸಲ ಭಯೋತ್ಪಾದಕರನ್ನು ಭೇಟಿಯಾಗಿದ್ದ ಮತ್ತು ಅವರಿಗೆ ಆ್ಯಂಡ್ರಾಯ್ಡ್ ಫೋನ್ ಚಾರ್ಜರ್ ಒದಗಿಸಿದ್ದ. ಈ ಚಾರ್ಜರ್ ಅಂತಿಮವಾಗಿ ಆತನ ಬಂಧನವನ್ನು ಸಾಧ್ಯವಾಗಿಸಿದ ಪ್ರಮುಖ ಪುರಾವೆಯಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
26 ಪ್ರವಾಸಿಗಳನ್ನು ಕೊಂದಿದ್ದ ಮೂವರು ಭಯೋತ್ಪಾದಕರಾದ ಸುಲೇಮಾನ್ ಅಲಿಯಾಸ್ ಆಸಿಫ್, ಜಿಬ್ರಾನ್ ಮತ್ತು ಹಂಝಾ ಅಫ್ಘಾನಿ ಅವರಿಗೆ ಪ್ರಮುಖ ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಿದ್ದ ಆರೋಪದಲ್ಲಿ ಕಟಾರಿಯನ್ನು ಕಳೆದ ವಾರ ಬಂಧಿಸಲಾಗಿದೆ. ಶ್ರೀನಗರದ ಹೊರವಲಯದಲ್ಲಿರುವ ಝಬರ್ವಾನ್ ಬೆಟ್ಟದಲ್ಲಿ ತಾನು ಹಲವಾರು ಸಲ ಭಯೋತ್ಪಾದಕರನ್ನು ಭೇಟಿಯಾಗಿದ್ದನ್ನು ಕಟಾರಿ ವಿಚಾರಣೆಯ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ.
ಜುಲೈನಲ್ಲಿ ಜಬರ್ವಾನ್ ತಪ್ಪಲಿನಲ್ಲಿ ನಡೆದ ಆಪರೇಷನ್ ಮಹಾದೇವ್‌ನಲ್ಲಿ ಈ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಭಾಗಶಃ ಹಾನಿಗೊಂಡಿದ್ದ ಚಾರ್ಜರ್‌ನ ಆಧಾರದಲ್ಲಿ ಪೊಲೀಸರು ಕಟಾರಿಯನ್ನು ಬಂಧಿಸಿದ್ದಾರೆ.