×
Ad

ಜಮ್ಮು-ಕಾಶ್ಮೀರ | ನಗರೋಟಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಿಂದ ಹಿಂದೆ ಸರಿದ ಕಾಂಗ್ರೆಸ್

Update: 2025-10-20 21:34 IST

ಸಾಂದರ್ಭಿಕ ಚಿತ್ರ | Photo Credit : PTI

ಶ್ರೀನಗರ,ಅ.20: ಜಮ್ಮು-ಕಾಶ್ಮೀರದ ನಗರೋಟಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧರಿಸಿದ್ದು, ಮಿತ್ರಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್‌ಗೆ(ಎನ್‌ಸಿ) ಈ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಈ ಕ್ರಮವು ಬಿಜೆಪಿ ವಿರೋಧಿ ಮತಗಳನ್ನು ಕ್ರೋಡಿಕರಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆಯಾದರೂ ಅದರ ನಿರ್ಧಾರವು ಉಭಯ ಪಕ್ಷಗಳ ನಡುವೆ ಒಳಗೊಳಗೆ ಹೊಗೆಯಾಡುತ್ತಿರುವ ಉದ್ವಿಗ್ನತೆಯನ್ನು ಎತ್ತಿ ತೋರಿಸಿದೆ.

ಜೆಕೆಪಿಸಿಸಿ ಸಲ್ಲಿಸಿರುವ ವರದಿಯ ಬಗ್ಗೆ ವಿವರವಾದ ಚರ್ಚೆಯ ಬಳಿಕ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಂಡು, ವಿಶೇಷವಾಗಿ ಕಾಂಗ್ರೆಸ್ ಮತ್ತು ಎನ್‌ಸಿ ಎರಡೂ ಸ್ನೇಹಪರವಾಗಿ ಕಣಕ್ಕಿಳಿದಿದ್ದ 2024ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿ ಈ ಕ್ಷೇತ್ರದಲ್ಲಿ ಎರಡನೇ ಸ್ಥಾನ ಗಳಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜಮ್ಮುಕಾಶ್ಮೀರ ಪ್ರದೇಶ ಕಾಂಗ್ರೆಸ್ ವಕ್ತಾರ ರವೀಂದ್ರ ಶರ್ಮಾ ತಿಳಿಸಿದರು.

ಹಾಲಿ ಬಿಜೆಪಿ ಶಾಸಕ ಹಾಗೂ ಮಾಜಿ ಎನ್‌ಸಿ ನಾಯಕ ದೇವೇಂದ್ರ ಸಿಂಗ್ ರಾಣಾ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿಧನರಾಗಿದ್ದು ನಗರೋಟಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯನ್ನು ಅಗತ್ಯವಾಗಿಸಿದೆ.

ನಗರೋಟಾ ಮತ್ತು ಬುಡ್ಗಾಮ್ ವಿಧಾನಸಭಾ ಕ್ಷೇತ್ರಗಳಿಗೆ ನ.11ರಂದು ಉಪಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಆರಂಭದಲ್ಲಿ ನಗರೋಟಾ ಉಪಚುನಾವಣೆಯಲ್ಲಿ ತನ್ನ ಸ್ಪರ್ಧೆಗೆ ಒತ್ತು ನೀಡಿತ್ತು. ತನ್ನ ಪಕ್ಷವು ಬುಡ್ಗಾಮ್‌ನಲ್ಲಿ ಸ್ಪರ್ಧಿಸಲಿದೆ. ಆದರೆ ಕಾಂಗ್ರೆಸ್ ನಗರೋಟಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೆಂಬಲಿಸುವುದಾಗಿ ಎನ್‌ಸಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದರು.

ಆದರೆ ಸರಕಾರ ರಚನೆ ಸಂದರ್ಭದಲ್ಲಿ ಸಂಪುಟ ಸ್ಥಾನಗಳನ್ನು ನಿರಾಕರಿಸಿದ್ದರಿಂದ ಹಿಡಿದು ಇತ್ತೀಚಿನ ರಾಜ್ಯಸಭಾ ಸ್ಥಾನಗಳಿಗಾಗಿ ಮಾತುಕತೆಗಳಲ್ಲಿ ಕಾಂಗ್ರೆಸ್‌ನ್ನು ಕಡೆಗಣಿಸಿರುವವರೆಗೆ ಹಲವಾರು ದೂರುಗಳನ್ನು ಉಲ್ಲೇಖಿಸಿರುವ ಬಲ್ಲ ಮೂಲಗಳು, ಎನ್‌ಸಿಯೊಂದಿಗೆ ಮೈತ್ರಿಯನ್ನು ಮುಂದುವರಿಸುವ ಬಗ್ಗೆ ಪಕ್ಷದಲ್ಲಿ ತೀವ್ರ ಅಸಮಾಧಾನವಿದೆ ಎಂದು ಹೇಳಿವೆ.

ಜಮ್ಮುಕಾಶ್ಮೀರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾರ್ಯತಂತ್ರದ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.

ಖಾಲಿಯಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಅ.24ರಂದು ಚುನಾವಣೆ ನಡೆಯಲಿದೆ. ಎನ್‌ಸಿ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರರಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿಯು ಏಳು ಬಿಜೆಪಿಯೇತರ ಪ್ರತಿಪಕ್ಷ ಶಾಸಕರ ಪೈಕಿ ಕೆಲವರು ನಾಲ್ಕನೇ ಸ್ಥಾನಕ್ಕಾಗಿ ಎನ್‌ಸಿ ಅಭ್ಯರ್ಥಿಗೆ ಮತ ಚಲಾಯಿಸುವುದರಿಂದ ದೂರವುಳಿದರೆ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News