×
Ad

ಭಾರೀ ಭಯೋತ್ಪಾದಕ ಸಂಚು ವಿಫಲಗೊಳಿಸಿದ ಜಮ್ಮುಕಾಶ್ಮೀರ ಪೋಲಿಸರು, ಏಳು ಜನರ ಬಂಧನ

ಬಹು ರಾಜ್ಯಗಳಲ್ಲಿ ದಾಳಿ, 2,900 ಕೆ.ಜಿ.ಸ್ಫೋಟಕ ವಶ

Update: 2025-11-10 20:11 IST

Photo | X / @PTI Videos

ಶ್ರೀನಗರ,ನ.10: ಜೈಶೆ ಮುಹಮ್ಮದ್(ಜೆಇಎಂ) ಮತ್ತು ಅನ್ಸಾರ್ ಘಝ್ವತುಲ್ಲಾ ಹಿಂದ್(ಎಜಿಯುಎಚ್) ಸಂಘಟನೆಗಳ ಅಂತರರಾಜ್ಯ ಭಯೋತ್ಪಾದಕ ಜಾಲವನ್ನು ಭೇದಿಸಿ ಇಬ್ಬರು ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸುವ ಮೂಲಕ ಭಯೋತ್ಪಾದಕರ ವಿರುದ್ಧ ಮಹತ್ವದ ಯಶಸ್ಸನ್ನು ಸಾಧಿಸಿರುವುದಾಗಿ ಜಮ್ಮುಕಾಶ್ಮೀರ ಪೋಲಿಸರು ಸೋಮವಾರ ತಿಳಿಸಿದ್ದಾರೆ. 2,900 ಕೆ.ಜಿ.ಗಳಷ್ಟು ಸ್ಫೋಟಕ ಸಾಮಗ್ರಿಗಳು, ವಿದ್ಯುನ್ಮಾನ ಸಾಧನಗಳು,ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಉಗ್ರ ನಿಗ್ರಹ ಕಾರ್ಯಾಚರಣೆಯ ವಿವರಗಳನ್ನು ನೀಡಿದ ಪೋಲಿಸ್ ವಕ್ತಾರರು,ಅ.19ರಂದು ಶ್ರೀನಗರದ ಹೊರವಲಯಗಳಲ್ಲಿ ಪೋಲಿಸರು ಮತ್ತು ಭದ್ರತಾ ಪಡೆಗಳಿಗೆ ಬೆದರಿಕೆಯೊಡ್ಡಿದ್ದ ಹಲವಾರು ಜೆಇಎಂ ಪೋಸ್ಟರ್‌ಗಳು ಕಂಡು ಬಂದಿದ್ದವು. ಈ ಬಗ್ಗೆ ನಡೆಸಿದ ತನಿಖೆಯು ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿಯ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿರುವ ಮೂಲಭೂತವಾದಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ‘ವೈಟ್-ಕಾಲರ್’ ಭಯೋತ್ಪಾದಕ ಜಾಲವನ್ನು ಬಯಲಿಗೆಳೆದಿದೆ ಎಂದು ತಿಳಿಸಿದರು.

ತನಿಖೆಯ ಸಂದರ್ಭದಲ್ಲಿ ಪೋಲಿಸರು ಜಮ್ಮುಕಾಶ್ಮೀರದ ನಿವಾಸಿಗಳಾದ ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್,ಯಾಸಿರುಲ್ ಅಷ್ರಫ್,ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್,ಮೌಲ್ವಿ ಇರ್ಫಾನ್ ಅಹ್ಮದ್, ಝಮೀರ್ ಅಹ್ಮದ್ ಅಹಂಗಿರ್ ಅಲಿಯಾಸ್ ಮುತ್ಲಾಶ್ ಡಾ.ಮುಝಮ್ಮಿಲ್ ಅಹ್ಮದ್ ಗನೈಯಿ ಅಲಿಯಾಸ್ ಮುಸೈಬ್ ಮತ್ತು ಡಾ.ಆದಿಲ್ ಎನ್ನುವವರನ್ನು ಬಂಧಿಸಿದ್ದಾರೆ.

ಇನ್ನೂ ಕೆಲವರು ಈ ಜಾಲದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು,ಅವರನ್ನು ಪತ್ತೆ ಹಚ್ಚಿ ಬಂಧಿಸಲು ಪ್ರಯತ್ನಗಳು ಜಾರಿಯಲ್ಲಿವೆ ಎಂದು ಪೋಲಿಸ್ ವಕ್ತಾರರು ತಿಳಿಸಿದರು.

ತನಿಖೆ ವೇಳೆ ಶ್ರೀನಗರ,ಅನಂತನಾಗ್,ಗಂದೇರಬಾಲ್ ಮತ್ತು ಶೋಪಿಯಾನ್‌ನ ವಿವಿಧೆಡೆಗಳಲ್ಲಿ ದಾಳಿ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು,ಹರ್ಯಾಣದ ಫರೀದಾಬಾದ್ ಮತ್ತು ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿಯೂ ಅಲ್ಲಿಯ ಪೋಲಿಸರ ಸಹಯೋಗದೊಂದಿಗೆ ದಾಳಿಗಳನ್ನು ನಡೆಸಲಾಗಿತ್ತು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News