ಜಮ್ಮುಕಾಶ್ಮೀರ | ದೇಶವಿರೋಧಿ ಚಟುವಟಿಕೆಗಳ ಆರೋಪ; ಲೆಫ್ಟಿನೆಂಟ್ ಗವರ್ನರ್ ರಿಂದ ಇಬ್ಬರು ಸರಕಾರಿ ಉದ್ಯೋಗಿಗಳ ಉಚ್ಚಾಟನೆ
ಮನೋಜ್ ಸಿನ್ಹಾ | PC : PTI
ಶ್ರೀನಗರ,ಆ.22 ದೇಶವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪಗಳಿಗೆ ಸಂಬಂಧಿಸಿ ಓರ್ವ ಶಿಕ್ಷಕ ಸೇರಿದಂತೆ ಇಬ್ಬರು ಸರಕಾರಿ ಉದ್ಯೋಗಿಗಳನ್ನು ಜಮ್ಮುಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ಉಚ್ಚಾಟಿಸಿದ್ದಾರೆ.
ಉಚ್ಚಾಟನೆಗೊಂಡ ಉದ್ಯೋಗಿಗಳನ್ನು ಕುಪ್ವಾರ ಜಿಲ್ಲೆಯ ಕರ್ನಾಹ್ನ ನಿವಾಸಿ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ಖುರ್ಷಿದ್ ಅಹ್ಮದ್ ರಾಥೋಡ್, ಕುಪ್ವಾರದ ಕೆರಾನ್ ನಿವಾಸಿ, ಕುರಿ ಸಂಗೋಪನಾ ಇಲಾಖೆಯ ಸಹಾಯಕ ಪಾಲಕ ಸಿಯಾದ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ.
ದೇಶದ ಭದ್ರತೆಯ ಹಿತದೃಷ್ಟಿಯಿಂದ ಸಂವಿಧಾನದ 311ನೇ ವಿಧಿಯ ನಿಬಂಧನೆ (2)ಯ ಉಪನಿಬಂಧನೆ (ಸಿ)ಯಡಿ ಆರೋಪಿಗಳ ಚಟುವಟಿಕೆಗಳು ದೇಶವಿರೋಧಿಯೆಂದು ಮನಗಂಡ ಬಳಿಕ ಅವರನ್ನು ಸೇವೆಯಿಂದ ಉಚ್ಛಾಟಿಸಲು ಲೆಫ್ಟಿನೆಂಟ್ ಗವರ್ನರ್ ಆದೇಶ ಹೊರಡಿಸಿದ್ದಾರೆ.
ಉಮರ್ ಅಬ್ದುಲ್ಲಾ ಸರಕಾರವು ಉದ್ಯೋಗಿಗಳ ವಜಾವನ್ನು ವಿರೋಧಿಸಿದ ಹೊರತಾಗಿಯೂ, ತಕ್ಷಣವೇ ಜಾರಿಗೆ ಬರುವಂತೆ ಉಚ್ಛಾಟನೆ ಆದೇಶವನ್ನು ಹೊರಡಿಸಲಾಗಿದೆ. ರಾಷ್ಟ್ರವಿರೋಧಿ ಚಟುವಟಿಕೆಗಳ ಆರೋಪಗಳಿಗೆ ಸಂಬಂಧಿಸಿ ಲೆಫ್ಟಿನೆಂಟ್ ಗವರ್ನರ್ ಅವರು, ಜಮ್ಮುಕಾಶ್ಮೀರದ 80ಕ್ಕೂ ಅಧಿಕ ಸರಕಾರಿ ಉದ್ಯೋಗಿಗಳನ್ನು ಉಚ್ಚಾಟಿಸಿದ್ದಾರೆ.
2019ರ ಆಗಸ್ಟ್ 5ರಂದು ಜಮ್ಮುಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ,ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಆನಂತರ ಅಲ್ಲಿನ ಆಡಳಿತವು ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆಯೆನ್ನಲಾಗಿದೆ.