ಜಮ್ಮು ಮತ್ತು ಕಾಶ್ಮೀರ| ಭದ್ರತಾ ಪಡೆಗಳಿಂದ ಮೂವರು ಉಗ್ರರ ಹತ್ಯೆ; ಎಕೆ 47 ರೈಫಲ್‌ಗಳ ವಶ
ಸಾಂದರ್ಭಿಕ ಚಿತ್ರ | NDTV
ಶೋಪಿಯಾನ್: ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಪಕ್ಷ ಮೂವರು ಲಷ್ಕರ್ ಉಗ್ರರು ಹತ್ಯೆಗೀಡಾಗಿರುವ ಘಟನೆ ಮಂಗಳವಾರ ಶೋಪಿಯಾನ್ ಜಿಲ್ಲೆಯ ಝಿನ್ಪಂಥರ್ ಕೆಲ್ಲರ್ ಪ್ರದೇಶದಲ್ಲಿ ನಡೆದಿದೆ.
ಹತ್ಯೆಗೀಡಾದ ಈ ಮೂವರು ಉಗ್ರರ ಪೈಕಿ, ಇಬ್ಬರು ಉಗ್ರರನ್ನು ಶೋಪಿಯಾನ್ ನಿವಾಸಿಗಳಾದ ಶಾಹಿದ್ ಕುಟ್ಟೆ ಹಾಗೂ ಅದ್ನಾನಿ ಎಂದು ಗುರುತಿಸಲಾಗಿದೆ. 2023ರಲ್ಲಿ ಈ ಇಬ್ಬರು ಲಷ್ಕರ್ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದರು. ಕಳೆದ ವರ್ಷ ಎಪ್ರಿಲ್ 8ರಂದು ಡ್ಯಾನಿಶ್ ರೆಸಾರ್ಟ್‌ನಲ್ಲಿ ನಡೆದಿದ್ದ ಗುಂಡಿನ ದಾಳಿ ಘಟನೆಯಲ್ಲಿ ಶಾಹಿದ್ ಕುಟ್ಟೆ ಕೂಡಾ ಭಾಗಿಯಾಗಿದ್ದ. ಈ ಘಟನೆಯಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ಹಾಗೂ ಓರ್ವ ಚಾಲಕ ಮೃತಪಟ್ಟಿದ್ದರು. ಕಳೆದ ವರ್ಷದ ಮೇ ತಿಂಗಳಲ್ಲಿ ಶೋಪಿಯಾನ್‌ನ ಹೀರ್ಪೊರಾದಲ್ಲಿ ನಡೆದಿದ್ದ ಓರ್ವ ಬಿಜೆಪಿ ಸರಪಂಚನ ಹತ್ಯೆಯಲ್ಲೂ ಈತ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.
2024ರಲ್ಲಿ ಲಷ್ಕರ್ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದ ಅದ್ನಾನ್ ಶಫಿ, ಶೋಪಿಯಾನ್‌ನ ವಾಚಿಯಲ್ಲಿ ನಡೆದಿದ್ದ ಹೊರ ರಾಜ್ಯದ ಕಾರ್ಮಿಕನೊಬ್ಬನ ಹತ್ಯೆ ಘಟನೆಯಲ್ಲಿ ಭಾಗಿಯಾಗಿದ್ದ. ಮತ್ತೊಬ್ಬ ಉಗ್ರನ ಗುರುತನ್ನು ಪತ್ತೆ ಹಚ್ಚಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಸುಳಿವಿನ ಕುರಿತು ರಾಷ್ಟ್ರೀಯ ರೈಫಲ್ಸ್ ಘಟಕದಿಂದ ನಿಖರ ಗುಪ್ತಚರ ಮಾಹಿತಿ ಸ್ವೀಕರಿಸಿದ ನಂತರ, ಉಗ್ರರೊಂದಿಗೆ ಎನ್‌ಕೌಂಟರ್ ನಡೆದ ಕೆಲ್ಲರ್ ಸ್ಥಳದ ಹೆಸರಿನಲ್ಲಿ ಭಾರತೀಯ ಸೇನಾಪಡೆಯ 'ಆಪರೇಷನ್ ಕೆಲ್ಲರ್' ಕಾರ್ಯಾಚರಣೆಗೆ ಚಾಲನೆ ನೀಡಿತ್ತು.