‘ಜನನಾಯಗನ್’ ಸೆನ್ಸಾರ್ ಪ್ರಮಾಣಪತ್ರ ವಿವಾದ | ಹೈಕೋರ್ಟ್ ಮೆಟ್ಟಲೇರುವಂತೆ ನಿರ್ಮಾಪಕರಿಗೆ ಸುಪ್ರೀಂಕೋರ್ಟ್ ಸೂಚನೆ
ಸುಪ್ರೀಂಕೋರ್ಟ್ | Photo Credit : PTI
ಹೊಸದಿಲ್ಲಿ, ಜ.15: ನಟ–ರಾಜಕಾರಣಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಪ್ರಮಾಣಪತ್ರ ನೀಡಿಕೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನ ವಿಭಾಗೀಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.
ಜನನಾಯಗನ್ ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯುವಲ್ಲಿ ನಿರ್ಮಾಪಕರು ವಿಫಲರಾದ ಹಿನ್ನೆಲೆಯಲ್ಲಿ, ಜನವರಿ 9ರಂದು ತೆರೆಕಾಣಬೇಕಿದ್ದ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.
ಚಿತ್ರವನ್ನು ಪುನರ್‌ಪರಿಶೀಲನಾ ಸಮಿತಿಗೆ ಕಳುಹಿಸುವ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷರ ಆದೇಶವನ್ನು ನಿರ್ಮಾಪಕರು ಪ್ರಶ್ನಿಸಿಲ್ಲವೆಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆದಾಗ್ಯೂ, ಈ ವಿಷಯದಲ್ಲಿ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವನ್ನು ಸಮೀಪಿಸಬಹುದೆಂದು ಸರ್ವೋಚ್ಚ ನ್ಯಾಯಾಲಯವು ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆ.ವಿ. ಪ್ರೊಡಕ್ಷನ್ಸ್ ಗೆ ತಿಳಿಸಿದೆ.
ಪೊಂಗಲ್ ಹಬ್ಬ (ಮಕರ ಸಂಕ್ರಾಂತಿ)ದ ಸಂದರ್ಭ ಜನನಾಯಗನ್ ಬಿಡುಗಡೆಗೊಳ್ಳಬೇಕಿದ್ದರೂ ಆದೇಶ ನೀಡಿಕೆಯಲ್ಲಿ ವಿಳಂಬವಾಗಿರುವ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದತ್ತಾ ಅವರು, “ಅರ್ಜಿಯನ್ನು ಸಲ್ಲಿಸಿದ ಒಂದೆರಡು ದಿನಗಳಲ್ಲೇ ವಿಚಾರಣೆ ಇತ್ಯರ್ಥವಾಗುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಎಲ್ಲಾ ಪ್ರಕರಣಗಳಿಗೂ ಅನ್ವಯವಾಗಬೇಕು” ಎಂದು ಹೇಳಿದರು.
ಈ ಅರ್ಜಿಯು ಜನವರಿ 6ರಂದು ಸಲ್ಲಿಕೆಯಾಗಿದ್ದು, ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ಸಿಬಿಎಫ್‌ಸಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿದೆ ಎಂದರು.
ಜನನಾಯಗನ್ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಜನವರಿ 20ರಂದು ತೀರ್ಪು ನೀಡಲು ಪ್ರಯತ್ನಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ವಿಜಯ್ ನಿರ್ಧರಿಸಿರುವುದರಿಂದ, ಜನನಾಯಗನ್ ಅವರು ನಟಿಸಿರುವ ಕೊನೆಯ ಚಿತ್ರವಾಗಲಿದೆ. ಈ ಚಿತ್ರವನ್ನು 2026ರ ಜನವರಿ 9ರಂದು ಬಿಡುಗಡೆಗೊಳಿಸಲು ನಿರ್ಮಾಪಕರು ನಿರ್ಧರಿಸಿದ್ದರು.