×
Ad

ಜೈಲು ಶಿಕ್ಷೆ ಕಡಿಮೆಗೊಳಿಸಿ: ಜನಾರ್ದನ ರೆಡ್ಡಿ ಮನವಿ; ತಿರಸ್ಕರಿಸಿದ ಕೋರ್ಟ್

Update: 2025-05-06 21:02 IST

 ಜನಾರ್ದನ ರೆಡ್ಡಿ | PC : NDTV 

ಹೈದರಾಬಾದ್: ಒಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತಾನು ಈಗಾಗಲೇ ಮೂರು ವರ್ಷ ಜೈಲು ವಾಸ ಅನುಭವಿಸಿದ್ದು, ತನಗೆ ಈಗ ವಿಧಿಸಲಾಗಿರುವ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಕಡಿಮೆಗೊಳಿಸಬೇಕೆಂದು ಕೋರಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮನವಿಯನ್ನು ಸಿಬಿಐ ನ್ಯಾಯಾಲಯ ತಳ್ಳಿಹಾಕಿದೆ.

ತನ್ನ ವಯಸ್ಸು ಹಾಗೂ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಜೈಲು ಶಿಕ್ಷೆಯನ್ನು ಕಡಿತಗೊಳಿಸುವಂತೆ ಅವರು ಮನವಿ ಮಾಡಿದ್ದರು. ತಾನು ಗಂಗಾವತಿ ಕ್ಷೇತ್ರದಿಂದ ಭಾರೀ ಬಹುಮತದಿಂದ ಶಾಸಕನಾಗಿ ಆಯ್ಕೆಯಾಗಿರುವುದು ಸಾರ್ವಜನಿಕ ಸೇವೆಗೆ ತಾನು ಸಮರ್ಪಿತನಾಗಿರುವುದನ್ನು ಬಿಂಬಿಸುತ್ತದೆ. ಆದುದರಿಂದ ತನ್ನ ಜೈಲು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಜನಾರ್ದನ ರೆಡ್ಡಿ ನ್ಯಾಯಾಲಯವನ್ನು ಕೋರಿದ್ದರು.

ಆದರೆ ಇದನ್ನು ತಿರಸ್ಕರಿಸಿದ ನ್ಯಾಯಾಲಯವು, ‘‘ ಹಾಗೆ ನೋಡಿದರೆ ನಿಮಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಬೇಕಿತ್ತು. ನೀವು ಎಸಗಿದ ಅಪರಾಧಕ್ಕೆ ನೀವು ಜೀವಾವಧಿ ಶಿಕ್ಷೆಗೆ ಅರ್ಹರಾಗಬೇಕಿತ್ತು ’’ ಎಂದು ಕಟುವಾಗಿ ಹೇಳಿದೆ.

ತೀರ್ಪು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರು ಹೈದರಾಬಾದ್‌ಗೆ ತೆರಳಿ ಸಿಬಿಐ ಕೋರ್ಟ್‌ಗೆ ಹಾಜರಾಗಿದ್ದರು.

ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ

ಜನಾರ್ದನ ರೆಡ್ಡಿ ಅವರಿಗೆ ಮೇಲ್ಮನವಿ ಸಲ್ಲಿಸಲು ಸಿಬಿಐ ನ್ಯಾಯಾಲಯ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಅವಧಿಯೊಳಗೆ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಹೈಕೋರ್ಟ್ ಜನಾರ್ದನ ರೆಡ್ಡಿ ಅವರ ಅರ್ಜಿಯನ್ನು ಪುರಸ್ಕರಿಸಿದಲ್ಲಿ ಅವರಿಗೆ ಜೈಲು ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯಿದೆ.

*13 ವರ್ಷಗಳ ದೀರ್ಘ ವಿಚಾರಣೆ

ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ 2009ರಲ್ಲಿಯೇ ಪ್ರಕರಣ ದಾಖಲಾಗಿತ್ತು. ಆದರೆ ಅರ್ಜಿಗಳ ವಿಲೇವಾರಿ ಹಾಗೂ ಆರೋಪಿಗಳಿಂದ ಹೈಕೋರ್ಟ್‌ಗೆ ಮೇಲ್ಮನವಿಗಳ ಹಿನ್ನಲೆಯಲ್ಲಿ ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಯು ಕುಂಟುತ್ತಲೇ ಸಾಗಿತ್ತು. ತರುವಾಯ ಸುಪ್ರೀಂಕೋರ್ಟ್ ವಿಚಾರಣೆಯ ಮೇಲೆ ನಿಗಾವಿರಿಸಿತು ಆಹಗೂ 2025ರ ಮೇ ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ಅಂತಿಮ ಗಡುವು ವಿಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News