ಜಾರ್ಖಂಡ್ |ಭದ್ರತಾ ಪಡೆಗಳಿಂದ ಮೂವರು ಶಂಕಿತ ಮಾವೋವಾದಿಗಳ ಹತ್ಯೆ
PC : PTI
ರಾಂಚಿ, ಸೆ. 24: ಗುಮ್ಲಾ ಜಿಲ್ಲೆಯ ಬಿಷ್ಣುಪುರ ಪೊಲೀಸ್ ಠಾಣಾ ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಭದ್ರತಾ ಪಡೆ ಹಾಗೂ ಶಂಕಿತ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಜಾರ್ಖಂಡ್ ಜನ ಮುಕ್ತಿ ಪರಿಷದ್ (ಜೆಜೆಎಂಪಿ)ನ ಸಣ್ಣ ಗುಂಪೊಂದರ ಇಬ್ಬರು ಉಪ ಕಮಾಂಡರ್‌ಗಳು ಸೇರಿದಂತೆ ಮೂವರು ಸದಸ್ಯರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಲಾಲು ಲೊಹಾರ, ಚೋಟು ಒರಾನ್ ಹಾಗೂ ಸುಜಿತ್ ಒರಾನ್ ಎಂದು ಗುರುತಿಸಲಾಗಿದೆ. ಲಾಲು ಲೊಹಾರ ಹಾಗೂ ಚೋಟು ಒರಾನ್ ಉಪ ವಿಭಾಗೀಯ ಕಮಾಂಡರ್‌ಗಳು. ಚೋಟು ಒರಾನ್ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈತ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾದವನಾಗಿದ್ದ. ಸುಜೀತ್ ಒರಾನ್ ಅವರ ತಂಡದ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ.
ಲೋಹರ್ದಾಗ ಹಾಗೂ ಗುಮ್ಲಾದ ಗಡಿ ಸಮೀಪ ಮಾವೋವಾದಿಗಳ ಗುಂಪೊಂದು ಕಂಡು ಬಂದಿದೆ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿ ಸ್ವೀಕರಿಸಿದ ಬಳಿಕ ಜಾರ್ಖಂಡ್‌ನ ಜಾಗ್ವಾರ್ ಹಾಗೂ ಜಾರ್ಖಂಡ್ ಪೊಲೀಸ್‌ನ ಜಂಟಿ ತಂಡ ಸ್ಥಳಕ್ಕೆ ದಾವಿಸಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶೋಧ ಕಾರ್ಯಾಚರಣೆ ಸಂದರ್ಭ ಬಿಷ್ಣುಪುರ ಪೊಲೀಸ್ ಠಾಣಾ ಪ್ರದೇಶದ ವ್ಯಾಪ್ತಿಯ ಕೆಚ್ಕಿಯ ರಾಗ್ರಿಟೋಲಿಯ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ಮಾವೋವಾದಿಗಳ ನಡುವೆ ಗಂಟೆಗಳ ಕಾಲ ಗುಂಡಿನ ಕಾಳಗ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಮಾವೋವಾದಿಗಳು ಹತ್ಯೆಯಾದರು. ಇವರಲ್ಲಿ ಇಬ್ಬರನ್ನು ಜೆಜೆಎಂಪಿಯ ಉಪ ವಲಯ ಕಮಾಂಡರ್ ಹಾಗೂ ಇನ್ನೊಬ್ಬನನ್ನು ಸ್ಕ್ವಾಡ್ ಸದಸ್ಯ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಪೊಲೀಸರು ಎಕೆ 47 ರೈಫಲ್ ಸೇರಿದಂತೆ 3 ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದ್ದಾರೆ.