×
Ad

ಗುಜರಾತಿನ ವಸತಿ ಸಂಕೀರ್ಣದಲ್ಲಿ ಜಾತಿ ತಾರತಮ್ಯ ಎದುರಿಸುತ್ತಿರುವ ಜೆಪಿ ಮಾರ್ಗನ್ ಉಪಾಧ್ಯಕ್ಷ

Update: 2024-02-27 20:39 IST

Photo: X \ @AnirudhKejriwal

ಅಹ್ಮದಾಬಾದ್: ‘ಗಿಫ್ಟ್ಸಿಟಿ ’ಯ ಪರಿಕಲ್ಪನೆಯಿಂದ ಪ್ರೇರಿತರಾಗಿ ಸಿಂಗಾಪುರ ಬದಲು ಗುಜರಾತನ್ನು ಆಯ್ಕೆ ಮಾಡಿಕೊಂಡಿದ್ದ ಜೆಪಿ ಮಾರ್ಗನ್ ನ ಉಪಾಧ್ಯಕ್ಷ ಅನಿರುದ್ಧ ಕೇಜ್ರಿವಾಲ್ ಅದಕ್ಕಾಗಿ ಈಗ ಪರಿತಪಿಸುತ್ತಿದ್ದಾರೆ. ಪ್ರದೇಶದಲ್ಲಿ ಮನೆ ಹುಡುಕಾಟದ ಸಂದರ್ಭದಲ್ಲಿ ತಾನು ಎದುರಿಸಿದ ಜಾತಿ ತಾರತಮ್ಯದ ಕುರಿತು ತನ್ನ ನೋವನ್ನು ಅವರು ಬಹಿರಂಗವಾಗಿ ತೋಡಿಕೊಂಡಿದ್ದಾರೆ.

ಎಕ್ಸ್ ಪೋಸ್ಟ್ನಲ್ಲಿ ತನ್ನ ದುಮ್ಮಾನಗಳನ್ನು ಹಂಚಿಕೊಂಡಿರುವ ಕೇಜ್ರಿವಾಲ್ ಗುಜರಾತ್ ಪೋಲಿಸ್, ಗುಜರಾತ್ ಬಿಜೆಪಿ, ಗುಜರಾತ್ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇತರರಿಗೆ ಟ್ಯಾಗ್ ಮಾಡಿದ್ದಾರೆ.

‘ವರ್ಷಗಳ ಕಾಲ ಮುಂಬಯಿ ವಾಸದ ಬಳಿಕ ಸಿಂಗಾಪುರದಲ್ಲಿಯ ಅವಕಾಶವನ್ನು ಕೈಬಿಟ್ಟು ಗುಜರಾತಿನಲ್ಲಿ ನೆಲೆಸಲು ಆಯ್ಕೆ ಮಾಡಿಕೊಂಡಿದ್ದೆ. ಗಿಫ್ಟ್ ಸಿಟಿಯ ಭರವಸೆ ಹಾಗೂ ನಮ್ಮ ಪ್ರಧಾನಿ ಮತ್ತು ಸರಕಾರ ನಮ್ಮ ಮುಂದಿರಿಸಿದ್ದ ಭವ್ಯಪರಿಕಲ್ಪನೆಯಿಂದ ನಾನು ಆಕರ್ಷಿತನಾಗಿದ್ದೆ. ಅದು ನನಗೆ ಎಷ್ಟೊಂದು ಸ್ಫೂರ್ತಿ ನೀಡಿತ್ತೆಂದರೆ ನಾನು ದೊಡ್ಡ ಹೆಜ್ಜೆಯೊಂದನ್ನಿರಿಸಿ ನನ್ನ ಮೊದಲ ಮನೆಯನ್ನು ಇಲ್ಲಿಯೇ ಖರೀದಿಸಲು ನಿರ್ಧರಿಸಿದ್ದೆ. ಭರವಸೆ ಮತ್ತು ಬೆಳವಣಿಗೆಯಿಂದ ಕೂಡಿದ್ದ ಭವಿಷ್ಯದ ಕನಸನ್ನು ನಾನು ಕಂಡಿದ್ದೆ. ಆದರೆ ನನ್ನ ಉತ್ಸಾಹ ಭಗ್ನಗೊಂಡಿದೆ. ನನ್ನ ಕನಸಿನ ಮನೆಗೆ ಸಂಬಂಧಿಸಿದಂತೆ ಅನಿರೀಕ್ಷಿತ ಸವಾಲುಗಳನ್ನು ನಾನು ಎದುರಿಸುತ್ತಿದ್ದೇನೆ. ನನಗೆ ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ, ನಾನು ಏನನ್ನಾದರೂ ಮಾಡಿದ್ದೇನೆ ಎಂಬ ಕಾರಣಕ್ಕಲ್ಲ, ನಾನು ಜನ್ಮತಃ ಗುಜರಾತಿಯಲ್ಲ ಎನ್ನುವುದಕ್ಕಾಗಿ ’ ಎಂದು ಕೇಜ್ರಿವಾಲ್ ತನ್ನ ಪೋಸ್ಟ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ತನ್ನ ನಿರಾಶೆಯನ್ನು ವ್ಯಕ್ತಪಡಿಸಿರುವ ಅವರು,‘ಈ ಅನುಭವವು ಭಾರತದಲ್ಲಿ ಇನ್ನೂ ಉಳಿದುಕೊಂಡಿರುವ ಸಾಮಾಜಿಕ ಅಡೆತಡೆಗಳನ್ನು ನೆನಪಿಸಿದೆ. ಇನ್ನೂ ಕೆಟ್ಟದ್ದೆಂದರೆ ಮನೆಯನ್ನು ಪ್ರವೇಶಿಸಲು ನಾನು ಸಫಲನಾದರೂ ಸಂತೋಷ ನನ್ನಿಂದ ದೂರವಾಗಲಿದೆ ಮತ್ತು ತೊಂದರೆಗಳು ಎದುರಾಗಲಿವೆ ಎಂದು ನನಗೆ ಎಚ್ಚರಿಕೆಯನ್ನು ನೀಡಲಾಗಿದೆ. ಇದು ನುಂಗಲಾಗದ ಕಹಿ ಮಾತ್ರೆಯಾಗಿದೆ. ಮುಂಬಯಿ ಬದುಕನ್ನು ತೊರೆದು ಸಿಂಗಾಪುರದಲ್ಲಿಯ ಅವಕಾಶವನ್ನು ಕೈಬಿಟ್ಟು ಗುಜರಾತನ್ನು ಆಯ್ಕೆ ಮಾಡಿಕೊಂಡ ನಾನು ಇಂತಹ ತಾರತಮ್ಯವನ್ನು ಎದುರಿಸುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ. ಈ ಅನುಭವು ದುಃಸ್ವಪ್ನಕ್ಕಿಂತ ಕಡಿಮೆಯೇನಿಲ್ಲ. ಭರವಸೆಯೊಂದಿಗೆ ನಾನು ಆಯ್ಕೆ ಮಾಡಿಕೊಂಡಿದ್ದ ಸ್ಥಳದಲ್ಲಿ ಇಂತಹ ಬಹಿರಂಗ ಜಾತಿವಾದವನ್ನು ಎದುರಿಸುತ್ತಿರುವ ನೋವು ವರ್ಣನಾತೀತವಾಗಿದೆ ’ ಎಂದು ಟ್ವೀಟಿಸಿದ್ದಾರೆ.

ತನ್ನ ಹಕ್ಕುಗಳು ಮತ್ತು ಹೂಡಿಕೆಗಳನ್ನು ಮರಳಿ ಪಡೆಯಲು ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ. ಅವರ ಪೋಸ್ಟ್ ಶೀಘ್ರವೇ ವೈರಲ್ ಆಗಿದ್ದು,ಬಳಕೆದಾರರಿಂದ ಬಹಳಷ್ಟು ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.

‘ಅನಿರುದ್ಧ, ನಿಮ್ಮ ಅನುಭವವು ವಿಷಾದವನ್ನುಂಟು ಮಾಡಿದೆ. ಆದರೆ ಇದು ಗುಜರಾತಿನಲ್ಲಿ ವಾಸವಾಗಿರುವುದರ ಕಟುಸತ್ಯಗಳಲ್ಲಿ ಒಂದಾಗಿದೆ. ನೀವು ಮತ್ತು ನಿಮ್ಮ ಕುಟುಂಬ ಚೆನ್ನಾಗಿದ್ದೀರಿ ಎಂದು ಆಶಿಸಿದ್ದೇನೆ ’ಎಂದು ಓರ್ವ ಬಳಕೆದಾರ ಬರೆದಿದ್ದರೆ, ಇನ್ನೋರ್ವ ಬಳಕೆದಾರರು,‘ಕೇವಲ ಗಿಫ್ಟ್ ಸಿಟಿಗಾಗಿ ಗುಜರಾತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪಾನ ನಿಷೇಧವನ್ನು ಸಡಿಲಿಸಿದಾಗ ಅಚ್ಚರಿಯುಂಟಾಗಿತ್ತು. ನಾವು ಎಷ್ಟೊಂದು ಆಳವಾಗಿ ಬೇರೂರಿರುವ ಜಾತಿವಾದಿ ಸಮಾಜವಾಗಿದ್ದೇವೆ ಎನ್ನುವುದನ್ನು ಇವೆಲ್ಲವೂ ಸಾಬೀತುಗೊಳಿಸಿವೆ. ನಿಮ್ಮ ಸಮಸ್ಯೆ ಶೀಘ್ರ ಪರಿಹಾರವಾಗುತ್ತದೆ ಎಂದು ಆಶಿಸಿದ್ದೇನೆ. ಧರ್ಮ ಅಥವಾ ಜಾತಿ ಆಧಾರಿತ ತಾರತಮ್ಯ ಗಿಫ್ಟ್ ಸಿಟಿಗೆ ಕಳಂಕವಾಗಿದೆ ’ ಎಂದು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News