ಎಪ್ಸ್ಟೀನ್ ಕಡತದಲ್ಲಿ ಪ್ರಧಾನಿ ಮೋದಿಯ ಇಸ್ರೇಲ್ ಭೇಟಿ ಬಗ್ಗೆ ಉಲ್ಲೇಖ: ಸುಳ್ಳು ಕಥೆಗಳು ಎಂದು ತಿರಸ್ಕರಿಸಿದ ಭಾರತ
ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಎಪ್ಸ್ಟೀನ್ ಕಡತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ 2017ರಲ್ಲಿ ಇಸ್ರೇಲ್ ಭೇಟಿ ಬಗ್ಗೆ ಉಲ್ಲೇಖಿಸಿದ್ದ ಇಮೇಲ್ ಅನ್ನು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಳ್ಳಿಹಾಕಿದೆ ಮತ್ತು ಅದನ್ನು ವದಂತಿ ಎಂದು ಹೇಳಿದೆ.
ಈ ಉಲ್ಲೇಖವನ್ನು ಅಪರಾಧಿಯೊಬ್ಬನ ನಕಲಿ ವದಂತಿಗಳು ಎಂದು ಕರೆದ ವಿದೇಶಾಂಗ ಸಚಿವಾಲಯ, ಇದರಲ್ಲಿನ ಉಲ್ಲೇಖವನ್ನು ಸಾರಸಗಟವಾಗಿ ತಿರಸ್ಕರಿಸಿದೆ.
ಎಪ್ಸ್ಟೀನ್ ಕಡತಗಳಲ್ಲಿ ಪ್ರಧಾನಿ ಮೋದಿ ಮತ್ತು ಅವರ ಇಸ್ರೇಲ್ ಭೇಟಿಯ ಉಲ್ಲೇಖವಿರುವ ಇಮೇಲ್ ಸಂದೇಶದ ವರದಿಗಳನ್ನು ನಾವು ನೋಡಿದ್ದೇವೆ. ಜುಲೈ 2017ರಲ್ಲಿ ಪ್ರಧಾನಿಯವರ ಇಸ್ರೇಲ್ ಅಧಿಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್‌ನಲ್ಲಿರುವ ಉಳಿದ ಪ್ರಸ್ತಾಪಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬರ ಕಸದಂತಹ ಸುಳ್ಳು ಕಥೆಗಳು, ಅದನ್ನು ಅತ್ಯಂತ ತಿರಸ್ಕಾರದಿಂದ ವಜಾಗೊಳಿಸಬೇಕಾದ ವಿಷಯವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಂಗ ಇಲಾಖೆ (DOJ) ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಗಣನೀಯ ಪ್ರಮಾಣದ ದಾಖಲೆಗಳನ್ನು(Epstein files) ಬಿಡುಗಡೆ ಮಾಡಿದೆ. ಬಿಡುಗಡೆಯಾದ ದಾಖಲೆಗಳು ಮೂರು ಮಿಲಿಯನ್ ಪುಟಗಳನ್ನು ಮೀರಿದೆ ಎಂದು ಯುಎಸ್ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಹೇಳಿದ್ದಾರೆ. ಈ ಕಡತಗಳು 2,000ಕ್ಕೂ ಹೆಚ್ಚು ವೀಡಿಯೊಗಳು ಮತ್ತು ಸರಿಸುಮಾರು 180,000 ಚಿತ್ರಗಳನ್ನು ಒಳಗೊಂಡಿದೆ.