ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ
ಸುನೇತ್ರಾ ಪವಾರ್ (Photo credit: indiatoday.in)
ಮುಂಬೈ: ಮುಂಬೈಯ ಲೋಕಭವನದಲ್ಲಿ ಶನಿವಾರ ಆಯೋಜಿಸಲಾದ ಸಮಾರಂಭದಲ್ಲಿ ಎನ್‌ಸಿಪಿ (ಎಪಿ) ವರಿಷ್ಠ ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಸುನೇತ್ರಾ ಪವಾರ್ ಅವರು ಈ ಹುದ್ದೆಯನ್ನು ಅಲಂಕರಿಸುತ್ತಿರುವ ಮೊದಲ ಮಹಿಳೆಯಾಗಿದ್ದಾರೆ. ಹಿಂದೆ ಈ ಹುದ್ದೆಯನ್ನು ಅಜಿತ್ ಪವಾರ್ ಅವರು ನಿರ್ವಹಿಸುತ್ತಿದ್ದರು. ಬಾರಾಮತಿಯಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಹಿತ ಐವರು ಮೃತಪಟ್ಟಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಉಪಸ್ಥಿತಿಯಲ್ಲಿ ರಾಜ್ಯಪಾಲ ಆಚಾರ್ಯ ದೇವವೃತ ಅವರು ಸುನೇತ್ರಾ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಸುನೇತ್ರಾ ಪವಾರ್ ಅವರ ಪ್ರಮಾಣ ವಚನ ಸ್ವೀಕಾರದ ಸಂದರ್ಭ ‘‘ಅಜಿತ್ ಪವಾರ್ ಅಮರರಾಗಲಿ’’ ಎಂಬ ಘೋಷಣೆಗಳು ಸಭಾಂಗಣವನ್ನು ತುಂಬಿದವು.
ಸುನೇತ್ರಾ ಪವಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಹೊಸ ಕರ್ತವ್ಯ ನಿರ್ವಹಿಸಿಲಿರುವ ಅವರಿಗೆ ಶುಭ ಹಾರೈಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಸುನೇತ್ರಾ ಪವಾರ್ ಅವರನ್ನು ಅಭಿನಂದಿಸಿದ್ದಾರೆ.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಮಿತ್ರ ಪಕ್ಷವಾದ ಎನ್‌ಸಿಪಿಯ ಅಜಿತ್ ಪವಾರ್ ಬಣವು ತಮ್ಮ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಸುನೇತ್ರಾ ಪವಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಒಂದು ದಿನದ ಬಳಿಕ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗಂಟೆಗಳ ಬಳಿಕ ಅವರು ಶಾಸಕಾಂಗ ಪಕ್ಷದ ನಾಯಕಿ ಸ್ಥಾನದ ಪ್ರಸ್ತಾವವನ್ನು ಒಪ್ಪಿಕೊಂಡರು. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುವುದರೊಂದಿಗೆ ಸುನೇತ್ರಾ ಪವಾರ್ ಅವರು ರಾಜ್ಯ ಸರಕಾರದಲ್ಲಿ ಅಬಕಾರಿ ಹಾಗೂ ಕ್ರೀಡಾ ಖಾತೆಯನ್ನು ನಿರ್ವಹಿಸುವುದನ್ನು ಮುಂದುವರಿಸಲಿದ್ದಾರೆ.
ನೂತನ ನಿಯೋಜಿತ ಉಪಮುಖ್ಯಮಂತ್ರಿಗೆ ರಾಜ್ಯ ಅಬಕಾರಿ ಸುಂಕ, ಕ್ರೀಡೆ ಹಾಗೂ ಯುವಜನ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಫ್ ಸೇರಿದಂತೆ ಪ್ರಮುಖ ಖಾತೆಗಳ ಜವಾಬ್ದಾರಿಯನ್ನೂ ನೀಡಲಾಗಿದೆ.