×
Ad

ಶೂ ದಾಳಿ ನಡೆಸಿದ್ದ ವಕೀಲರನ್ನು ತಾನೇಕೆ ಕ್ಷಮಿಸಿದ್ದೆ ಎನ್ನುವುದನ್ನು ಬಹಿರಂಗಗೊಳಿಸಿದ ನ್ಯಾ. ಗವಾಯಿ

ʼಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲʼ ಎಂದು ಗವಾಯಿ ಅವರತ್ತ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್

Update: 2025-11-24 15:54 IST

ನ್ಯಾ.ಬಿ.ಆರ್. ಗವಾಯಿ |Photo Credit : PTI 

ಹೊಸದಿಲ್ಲಿ: ಭಾರತದ 52ನೇ ಮುಖ್ಯ ನ್ಯಾಯಾಧೀಶರಾಗಿ ತನ್ನ ಕೊನೆಯ ದಿನವಾಗಿದ್ದ ರವಿವಾರ ನ್ಯಾ.ಬಿ.ಆರ್. ಗವಾಯಿ ಅವರು ವಿಷ್ಣುವಿನ ಕುರಿತು ತನ್ನ ಹೇಳಿಕೆಗಾಗಿ ಹಿರಿಯ ವಕೀಲರೋರ್ವರು ತನ್ನತ್ತ ಶೂ ಎಸೆಯಲು ನಡೆಸಿದ್ದ ಪ್ರಯತ್ನ ಸೇರಿದಂತೆ ತನ್ನ ಅಧಿಕಾರಾವಧಿಯಲ್ಲಿನ ಮಹತ್ವದ ಘಟನೆಗಳ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದರು.

‘ಅದು ನಾನು ಸಹಜವಾಗಿಯೇ ತೆಗೆದುಕೊಂಡಿದ್ದ ನಿರ್ಧಾರ ಎಂದು ಭಾವಿಸಿದ್ದೇನೆ, ಬಹುಶಃ ನನ್ನ ಬಾಲ್ಯದಲ್ಲಿ ಬೆಳೆಸಿಕೊಂಡಿದ್ದ ಚಿಂತನಾ ಪ್ರಕ್ರಿಯೆಯಿಂದ ಅದು ರೂಪುಗೊಂಡಿದ್ದಿರಬಹುದು. ಸುಮ್ಮನೆ ಅದನ್ನು ನಿರ್ಲಕ್ಷಿಸುವುದೇ ಸರಿಯಾದ ಕೆಲಸ ಎಂದು ನಾನು ಭಾವಿಸಿದ್ದೆ’ ಎಂದು ನ್ಯಾ.ಗವಾಯಿ ತನ್ನ ಅಧಿಕೃತ ನಿವಾಸದಲ್ಲಿ ಅನೌಪಚಾರಿಕ ಸಂವಾದದ ವೇಳೆ ಹೇಳಿದರು.

ಅ.5ರಂದು ಸರ್ವೋಚ್ಚ ನ್ಯಾಯಾಲಯವು ನಾಟಕೀಯ ದೃಶ್ಯವೊಂದಕ್ಕೆ ಸಾಕ್ಷಿಯಾಗಿತ್ತು. 71ರ ಹರೆಯದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರು ನ್ಯಾ.ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ್ದರು. ಭದ್ರತಾ ಸಿಬ್ಬಂದಿಗಳು ಕಿಶೋರ್ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಕ್ಕೆ ಕರೆದೊಯ್ಯುತ್ತಿದ್ದಾಗ,‌ ‘ಸನಾತನ ಧರ್ಮದ ಅವಮಾನವನ್ನು ಭಾರತವು ಸಹಿಸುವುದಿಲ್ಲ’ ಎಂದು ಅವರು ಹೇಳಿದ್ದರು.

ಮಧ್ಯಪ್ರದೇಶದಲ್ಲಿ ಹಾನಿಗೀಡಾಗಿರುವ ವಿಷ್ಣುವಿನ ವಿಗ್ರಹದ ಮರುಸ್ಥಾಪನೆಯನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭ ‘ಹೋಗಿ ದೇವರನ್ನೇ ಕೇಳಿ’ ಎಂಬ ತನ್ನ ವಿವಾದಾತ್ಮಕ ಹೇಳಿಕೆಗಾಗಿ ನ್ಯಾ.ಗವಾಯಿ ಅವರು ವ್ಯಾಪಕ ಟೀಕೆಗಳಿಗೆ ಗುರಿಯಾದ ಕೆಲವೇ ವಾರಗಳ ಬಳಿಕ ಈ ಆಘಾತಕಾರಿ ಘಟನೆ ನಡೆದಿತ್ತು.

ನ್ಯಾ.ಗವಾಯಿ ಅವರು ಈ ವರ್ಷದ ಮೇ ತಿಂಗಳಿನಿಂದ ನವಂಬರ್‌ವರೆಗೆ ಆರು ತಿಂಗಳ ಅವಧಿಗೆ ಭಾರತದ ಮುಖ್ಯ ನ್ಯಾಯಾಧೀಶರಾಗಿ(ಸಿಜೆಐ) ಕಾರ್ಯ ನಿರ್ವಹಿಸಿ ರವಿವಾರ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ಸಿಜೆಐ ಹುದ್ದೆಗೇರಿದ ಮೊದಲ ಬೌದ್ಧ ಮತ್ತು ಎರಡನೇ ದಲಿತ ವ್ಯಕ್ತಿಯಾಗಿದ್ದಾರೆ.

ನ್ಯಾ.ಸೂರ್ಯಕಾಂತ್ ಅವರು ಭಾರತದ ನೂತನ ಮುಖ್ಯ ನ್ಯಾಯಾಧೀಶರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News