ಕಾನ್ಪುರ | ನಾಮಫಲಕ ವಿವಾದ : ಉದ್ವಿಗ್ನತೆ ಬಳಿಕ 24 ಮಂದಿ ವಿರುದ್ಧ ಎಫ್ಐಆರ್
ಸಾಂದರ್ಭಿಕ ಚಿತ್ರ | indianexpress
ಕಾನ್ಪುರ : ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ವಾರ್ಷಿಕ ʼಬರಾವಫತ್ʼ(ಮೀಲಾದ್) ಮೆರವಣಿಗೆಗೆ ಅಲಂಕಾರದ ಭಾಗವಾಗಿ ಕಾನ್ಪುರ ಪ್ರದೇಶದಲ್ಲಿ ಅಳವಡಿಸಿದ "ಐ ಲವ್ ಮುಹಮ್ಮದ್" ಎಂದು ಬರೆದಿರುವ ನಾಮಫಲಕ ಕೋಮು ಉದ್ವಿಗ್ನತೆಗೆ ಕಾರಣವಾಗಿದೆ. ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಕೆಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮೊಹಲ್ಲಾ ಸಯ್ಯದ್ ನಗರದ ಜಾಫರ್ ವಾಲಿ ಗಾಲಿಯ ಮುಂದೆ ಬಾರಾವಫತ್ ಮೆರವಣಿಗೆಯ ಭಾಗವಾಗಿ ನಾಮಫಲಕ ಹಾಕಲಾಗಿದೆ. ಇದು ಹೊಸ ಸಂಪ್ರದಾಯವನ್ನು ಪರಿಚಯಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಬ್ಇನ್ಸ್ಪೆಕ್ಟರ್ ಪಂಕಜ್ ಶರ್ಮಾ ಅವರು ಈ ಕುರಿತು ದೂರು ನೀಡಿದ್ದಾರೆ. ಸೆಪ್ಟೆಂಬರ್ 4ರಂದು ಸ್ಥಳೀಯ ಹಿಂದೂ ಸಮುದಾಯದ ಸದಸ್ಯರು ನಾಮಫಲಕಕ್ಕೆ ವಿರೋಧಿಸಿದ್ದಾರೆ. ಮುಸ್ಲಿಂ ಸಮುದಾಯದವರು ನಾಮಫಲಕವನ್ನು ತೆರವುಗೊಳಿಸದಂತೆ ಒತ್ತಾಯಿಸಿದ್ದಾರೆ. ಇದು ಚರ್ಚೆ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆ ಬಳಿಕವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಫಲಕವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಮತ್ತು ವಿರೋಧಿ ಗುಂಪುಗಳನ್ನು ಚದುರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 5ರಂದು ರಾವತ್ಪುರ ಗ್ರಾಮದಲ್ಲಿ “ಬಾರಾವಾಫತ್” ಮೆರವಣಿಗೆಯ ಸಮಯದಲ್ಲಿ, ಮುಸ್ಲಿಂ ಯುವಕರು ಹಿಂದೂ ಸಮುದಾಯಕ್ಕೆ ಸೇರಿದ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಐದು ದಿನಗಳ ನಂತರ, ಸೆಪ್ಟೆಂಬರ್ 10 ರಂದು, ಎರಡೂ ಘಟನೆಗಳ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿ ರಾವತ್‌ಪುರ ಪೊಲೀಸ್ ಠಾಣೆಯಲ್ಲಿ 24 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.