ಕಾನ್ಪುರ ಐಐಟಿ ವಿದ್ಯಾರ್ಥಿಯ ಮೃತದೇಹ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆ
Photo Credit : NDTV
ಕಾನ್ಪುರ(ಉ.ಪ್ರ.), ಅ.2: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ವಿದ್ಯಾರ್ಥಿಯೊಬ್ಬರು ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಠಡಿಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಇತರ ವಿದ್ಯಾರ್ಥಿಗಳು ಮಾಹಿತಿ ನೀಡಿದ ಬಳಿಕ ಕೊಠಡಿಯ ಬಾಗಿಲನ್ನು ಒಡೆದು ನೋಡಿದ ಪೊಲೀಸರಿಗೆ ವಿದ್ಯಾರ್ಥಿಯ ಮೃತದೇಹ ಕಂಡುಬಂದಿದೆ.
ಹರ್ಯಾಣದ ಧೀರಜ್ ಸೈನಿ (22) ಮೃತಪಟ್ಟ ವಿದ್ಯಾರ್ಥಿ. ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಈತ ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿದ್ದಾರೆ. ಈತನ ಮೃತದೇಹ ಹಾಸ್ಟೆಲ್‌ನ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಕಲ್ಯಾಣ್‌ಪುರದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ಸೈನಿ ಅವರು ಕೆಲವು ದಿನಗಳ ಹಿಂದೆಯಷ್ಟೇ, ತಾನು ಡಿಸೆಂಬರ್‌ನಲ್ಲಿ ಊರಿಗೆ ಬರುವುದಾಗಿ ಅವರ ಸಹೋದರಿಗೆ ತಿಳಿಸಿದ್ದರೆನ್ನಲಾಗಿದೆ. ಸೈನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಆನಂತರವಷ್ಟೇ ವಿದ್ಯಾರ್ಥಿಯ ಸಾವಿನ ಕಾರಣವನ್ನು ದೃಢಪಡಿಸಬಹುದೆಂದು ರಂಜಿತ್ ಕುಮಾರ್ ತಿಳಿಸಿದ್ದಾರೆ.