ಕನ್ವರ್ ಯಾತ್ರೆಯ ದಾರಿಯಲ್ಲಿ ಗುಂಪುಗಳಿಂದ ಢಾಬಾ ಮಾಲಕರ ‘ಪ್ಯಾಂಟ್ ತಪಾಸಣೆ’: ಉವೈಸಿ ಆಕ್ರೋಶ
ಅಸದುದ್ದೀನ್ ಉವೈಸಿ | PC : PTI
ಹೊಸದಿಲ್ಲಿ: ಉತ್ತರಪ್ರದೇಶ ಹಾಗೂ ಉತ್ತರಾಖಂಡದ ವಿವಿಧೆಡೆ ನಡೆಯುವ ಕನ್ವರ್ ಯಾತ್ರೆಯ ದಾರಿಯುದ್ದಕ್ಕೂ ಇರುವ ಢಾಬಾ ಹಾಗೂ ಉಪಹಾರಗೃಹಗಳ ಮಾಲಕರ ಧರ್ಮವನ್ನು ದೃಢಪಡಿಸಿಕೊಳ್ಳಲು ಅವರಿಗೆ ಪ್ಯಾಂಟ್ ಗಳನ್ನು ಬಿಚ್ಚುವಂತೆ ಕೆಲವು ಕೇಸರಿ ಗುಂಪುಗಳು ಹೇಳಿದ್ದವು ಎಂಬ ವರದಿಗಳ ಬಗ್ಗೆ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ಟಿ.ಹಸನ್ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಹೊಟೇಲ್ ಮಾಲಕರನ್ನು ಪ್ಯಾಂಟ್ ಬಿಚ್ಚುವಂತೆ ಹೇಳುವ ಈ ಗುಂಪುಗಳು ಯಾವುವು? ಅವರೇನು ಸರಕಾರ ನಡೆಸುತ್ತಿದ್ದಾರೆಯೇ ಅಥವಾ ಆಡಳಿತದ ಉಸ್ತುವಾರಿಯನ್ನು ಹೊಂದಿದ್ದಾರೆಯೇ?’’ ಎಂದು ಉವೈಸಿ ಪ್ರಶ್ನಿಸಿದರು. ಕೂಡಲೇ ಈ ಗುಂಪುಗಳನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದರು.
ಮುಝಾಫರ್ ನಗರದ ಹೆದ್ದಾರಿಯ ಸಮೀಪ ಅನೇಕ ಹೊಟೇಲ್ ಗಳು ಹಲವು ವರ್ಷಗಳಿಂದಲೂ ನಡೆಯುತ್ತಾ ಬಂದಿವೆ. 10 ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕನ್ವರ್ ಯಾತ್ರೆ ಹಿಂದೆಯೂ ಶಾಂತಿಯುತವಾಗಿ ನಡೆಯುತ್ತಿರಲಿಲ್ಲವೇ? ಎಂದವರು ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶ ಹಾಗೂ ಉತ್ತರಾಖಂಡದ ವಿವಿಧೆಡೆ ಕನ್ವರ್ ಯಾತ್ರಾ ಸಾಗುವ ದಾರಿಯುದ್ದಕ್ಕೂ ಇರುವ ಢಾಬಾಗಳು ಹಾಗೂ ಖಾನಾವಳಿಗಳ ಮಾಲಕರನ್ನು ಧರ್ಮದ ಆಧಾರದಲ್ಲಿ ಗುರುತಿಸುವುದನ್ನು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಅವರು ಖಂಡಿಸಿದ್ದು, ಇದೊಂದು ಬಗೆಯ ಭಯೋತ್ಪಾದನೆಯೆಂದು ಕಿಡಿಕಾರಿದ್ದಾರೆ.