×
Ad

ಕನ್ವರ್ ಯಾತ್ರೆ ಮಾರ್ಗದಲ್ಲಿ ಕ್ಯೂಆರ್ ಕೋಡ್ ಕಡ್ಡಾಯ ವಿರುದ್ಧ ಅರ್ಜಿ | ಉತ್ತರಾಖಂಡ, ಯುಪಿ ಸರಕಾರಗಳಿಗೆ ಸುಪ್ರೀಂ ನೋಟಿಸ್

Update: 2025-07-15 20:55 IST

ಕನ್ವರ್ ಯಾತ್ರೆ | PC : PTI 

ಹೊಸದಿಲ್ಲಿ: ಜು.11ರಂದು ಆರಂಭಗೊಂಡಿರುವ ಕನ್ವರ್ ಯಾತ್ರೆ ಮಾರ್ಗದಲ್ಲಿಯ ಅಂಗಡಿಗಳ ಮಾಲಿಕರು ತಮ್ಮ ಗುರುತಿನೊಂದಿಗೆ ಕ್ಯೂಆರ್ ಕೋಡ್‌ ಅನ್ನು ಪ್ರದರ್ಶಿಸಬೇಕೆಂಬ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರಕಾರಗಳಿಗೆ ನೋಟಿಸ್‌ ಗಳನ್ನು ಹೊರಡಿಸಿದ್ದು, ಮುಂದಿನ ವಿಚಾರಣಾ ದಿನಾಂಕವಾದ ಜು.22ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು ದಿಲ್ಲಿ ವಿವಿಯ ಪ್ರೊಫೆಸರ್ ಅಪೂರ್ವಾನಂದ ಝಾ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಅಂಗಡಿಗಳಲ್ಲಿ ಮಾಲಿಕರ ವಿವರಗಳಿರುವ ಕ್ಯೂಆರ್ ಕೋಡ್ ಪ್ರದರ್ಶಿಸಬೇಕೆಂಬ ನಿರ್ದೇಶನವು ಕನ್ವರ್ ಯಾತ್ರೆ ಮಾರ್ಗದಲ್ಲಿಯ ವ್ಯಾಪಾರಿಗಳು ತಮ್ಮ ಗುರುತುಗಳನ್ನು ಬಹಿರಂಗಗೊಳಿಸುವಂತೆ ಬಲವಂತ ಮಾಡುವಂತಿಲ್ಲ ಎನ್ನುವುದನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ 2024ರ ಆದೇಶಕ್ಕೆ ವಿರುದ್ಧವಾಗಿದೆ ಎಂದು ಪ್ರೊ.ಝಾ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.

ಮಾಲಿಕರು ಮತ್ತು ಉದ್ಯೋಗಿಗಳ ಹೆಸರುಗಳನ್ನು ಅಂಗಡಿ,ಧಾಬಾ ಅಥವಾ ರೆಸ್ಟೋರಂಟ್‌ ನ ಹೊರಗೆ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕೆಂಬ ನಿರ್ದೇಶನವು ಸಂವಿಧಾನದ 14,15,17,19 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.

ನಿರ್ದೇಶನವನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಮತ್ತು ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಅನುಸರಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕನ್ವರ್ ಯಾತ್ರೆಯು 2025, ಆ.9ರವರೆಗೆ ನಡೆಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News