×
Ad

ಸಮಾಜವಾದಿ ಪಕ್ಷದ ಸಂಸದನ ವಿರುದ್ಧ ಕರ್ನಿ ಸೇನಾ ಸಶಸ್ತ್ರ ರ್‍ಯಾಲಿ; ಮೂಕಪ್ರೇಕ್ಷಕರಾದ ಪೊಲೀಸರು!

Update: 2025-04-13 08:30 IST

PC: x.com/HateDetectors

ಆಗ್ರಾ: ಕರ್ನಿ ಸೇನಾ ನಡೆಸಿದ ಸಶಸ್ತ್ರ ರ್‍ಯಾಲಿ ಶುಕ್ರವಾರ ಆಗ್ರಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಗಂಭೀರ ಆತಂಕಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಸುರಕ್ಷೆ ಬಗ್ಗೆ ಪ್ರಶ್ನೆಗಳು ಮೂಡಿವೆ. ಸಮಾಜವಾದಿ ಪಕ್ಷದ ಸಂಸದ ಡಾ.ರಾಮ್‌ಜಿ ಲಾಲ್ ಸುಮನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಖಡ್ಗಗಳನ್ನು ಝಳಪಿಸುತ್ತಾ, ದೊಣ್ಣೆಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆದಿದೆ. ರಜಪೂತ ದೊರೆ ರಾಣಾ ಸಂಗಾ ಜನ್ಮದಿನಾಚರಣೆ ಸಂದರ್ಭದಲ್ಲಿ ಈ ರ್‍ಯಾಲಿ ನಡೆದಿದೆ. ಪೊಲೀಸರ ಸಮ್ಮುಖದಲ್ಲೇ ಸಾವಿರಾರು ಮಂದಿ ಸಶಸ್ತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪಿಎಸಿ ಸಿಬ್ಬಂದಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ, ರ್‍ಯಾಲಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರ್‍ಯಾಲಿಯಲ್ಲಿ ಭಾಗವಹಿಸಿದವರು ಖಡ್ಗಗಳನ್ನು ಝಳಪಿಸುತ್ತಿರುವ, ಘೋಷಣೆಗಳನ್ನು ಕೂಗುತ್ತಿರುವ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಜಪೂತ ದೊರೆ ರಾಣಾ ಸಂಗಾ ಮೊಘಲ್ ದೊರೆ ಬಾಬರ್ ನನ್ನು ಭಾರತಕ್ಕೆ ಆಹ್ವಾನಿಸಿದ್ದ ಎಂದು ಸಮಾಜವಾದಿ ಪಕ್ಷದ ಸಂಸದ ಡಾ.ರಾಮ್‌ಜಿ ಲಾಲ್ ಸುಮನ್ ಐತಿಹಾಸಿಕ ಮೂಲಗಳನ್ನು ಉಲ್ಲೇಖಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಪ್ರತಿಭಟನೆ ನಡೆಯಿತು. ಸುಮನ್ ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದು, ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಸಂಸದರು ರಜಪೂತರ ಹೆಮ್ಮೆಗೆ ಅವಮಾನಿಸಿದ್ದಾರೆ ಎಂದು ಕರ್ನಿ ಸೇನಾ ಆಪಾದಿಸಿದೆ.

ಈ ಹೇಳಿಕೆ ಹಿನ್ನೆಲೆಯಲ್ಲಿ ಕರ್ನಿ ಸೇನಾ ಕಾರ್ಯಕರ್ತರು ಆಗ್ರಾದಲ್ಲಿರುವ ಸಂಸದರ ನಿವಾಸದ ಮೇಲೆ ಮಾರ್ಚ್ 26ರಂದು ದಾಳಿ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News