×
Ad

ಕರ್ಣಿ ಸೇನಾ ಅಧ್ಯಕ್ಷ ಹತ್ಯೆ: ಒಬ್ಬ ಆರೋಪಿಯ ಬಂಧನ

Update: 2023-12-09 21:44 IST

ಸುಖದೇವ್ ಸಿಂಗ್‌ | Photo: NDTV 

ಹೊಸದಿಲ್ಲಿ: ರಜಪೂತ ನಾಯಕ ಹಾಗೂ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ ಹತ್ಯೆಗೆ ಸಂಬಂಧಿಸಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸುಖದೇವ್ ಸಿಂಗ್‌ರನ್ನು ಜೈಪುರದ ಅವರ ಮನೆಯಲ್ಲಿ ‘‘ಮನೆಗೆ ಅತಿಥಿಯಾಗಿ ಬಂದವರು’’ ಗುಂಡು ಹಾರಿಸಿ ಕೊಂದಿದ್ದರು.

ಬಂಧಿತನನ್ನು ರಾಮ್‌ವೀರ್ ಎಂಬುದಾಗಿ ಗುರುತಿಸಲಾಗಿದೆ. ಅವನು ಶೂಟರ್‌ಗಳಾದ ರೋಹಿತ್ ಮತ್ತು ನಿತಿನ್‌ಗೆ ಹತ್ಯಾ ಸ್ಥಳದಿಂದ ತಪ್ಪಿಸಿಕೊಳ್ಳಲು ನೆರವು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅವನು ಶೂಟರ್‌ಗಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅಜ್ಮೀರ್ ರಸ್ತೆಯಲ್ಲಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವನು ನಿತಿನ್ ವಾಸಿಸುವ ಗ್ರಾಮದಲ್ಲೇ ವಾಸಿಸುತ್ತಿದ್ದನು.

ಡಿಸೆಂಬರ್ 5ರಂದು ನಾಲ್ವರು ಸುಖದೇವ್ ಸಿಂಗ್ ಜೊತೆಗೆ ಮಾತನಾಡಲಿಕ್ಕಿದೆ ಎಂದು ಹೇಳಿ ಅವರ ಮನೆಗೆ ಹೋಗಿದ್ದರು. ಮಧ್ಯಾಹ್ನದ ವೇಳೆಗೆ ಆಗಂತುಕರ ಜೊತೆಗೆ ಸುಖದೇವ್ ಚಹಾ ಕುಡಿಯುತ್ತಿದ್ದರು. ಆಗ ಇಬ್ಬರು ಒಮ್ಮೆಲೇ ತಮ್ಮ ಕುರ್ಚಿಗಳಿಂದ ಎದ್ದು ಗೋಗಾಮೇದಿಯತ್ತ ಗುಂಡಿನ ಸುರಿಮಳೆಗೈದರು. ಅವರು ಸ್ಥಳದಲ್ಲೇ ಮೃತಪಟ್ಟರು.

ಈ ಸಂದರ್ಭದಲ್ಲಿ ಗೋಗಾಮೇದಿಯ ಭದ್ರತಾ ಸಿಬ್ಬಂದಿಯ ಪ್ರತಿ ಗುಂಡು ಹಾರಿಸಿದ್ದಾರೆ. ಗುಂಡಿನ ಕಾಳಗದಲ್ಲಿ ಮೂವರು ಶೂಟರ್‌ಗಳಲ್ಲಿ ಒಬ್ಬನಾಗಿದ್ದ ನವೀನ್ ಸಿಂಗ್ ಶೇಖಾವತ್ ಕೂಡ ಮೃತಪಟ್ಟಿದ್ದಾನೆ. ಗೋಗಾಮೇದಿಯ ಓರ್ವ ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೋಲ್ಡೀ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಗಾಂಗ್‌ಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ರೋಹಿತ್ ಗೋಡರ ಈ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News