×
Ad

ಕೇರಳ ರಾಜ್ಯ ಸಾಕ್ಷರತಾ ಯೋಜನೆಯ ಅತ್ಯಂತ ಹಳೆಯ ವಿದ್ಯಾರ್ಥಿ ಕಾರ್ತ್ಯಾಯಿನಿ ಅಮ್ಮ ನಿಧನ

Update: 2023-10-11 22:28 IST

Karthyayani Amma with Kerala CM Pinarayi Vijayan. Photo Credit: X/@pinarayivijayan

ಅಲಪ್ಪುಝ: ಕೇರಳ ರಾಜ್ಯ ಸಾಕ್ಷರತಾ ಯೋಜನೆಯ ಅತ್ಯಂತ ಹಳೆಯ ವಿದ್ಯಾರ್ಥಿ ಹಾಗೂ ಶತಾಯುಷಿ ಕಾರ್ತ್ಯಾಯಿನಿ (101) ಕರಾವಳಿ ಜಿಲ್ಲೆಯಾದ ಅಲಪ್ಪುಝದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರು ಪಾರ್ಶ‍್ವವಾಯು ಪೀಡಿತರಾದ ನಂತರ ಕೆಲ ಸಮಯ ಹಾಸಿಗೆ ಹಿಡಿದಿದ್ದರು.

ಕಾರ್ತ್ಯಾಯನಿ ಅಮ್ಮ ಕೇರಳ ರಾಜ್ಯ ಸಾಕ್ಷರತಾ ಯೋಜನೆಯ ಅತ್ಯಂತ ಹಳೆಯ ವಿದ್ಯಾರ್ಥಿ ಮಾತ್ರವಾಗಿರದೆ, ತಮ್ಮ 96ನೇ ವಯಸ್ಸಿನಲ್ಲಿ ನಾಲ್ಕನೆ ತರಗತಿಗೆ ಸಮಾನವಾದ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ್ದರು.

ಮಾರ್ಚ್ 2020ರಲ್ಲಿ ಅವರು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ನಾರಿ ಶಕ್ತಿ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

2019ರಲ್ಲಿ ಅವರು ಕಾಮನ್ ವೆಲ್ತ್ ಕಲಿಕೆ ಸದ್ಭಾವನೆಯ ರಾಯಭಾರಿಯಾಗಿದ್ದರು.

ಕಾರ್ತ್ಯಾಯಿನಿ ಅಮ್ಮ ಅವರ ನಿಧನಕ್ಕೆ ಬುಧವಾರ ಸಂತಾಪ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರು ಪ್ರಶಸ್ತಿ ಗಳಿಸಿದಾಗ ತಾವು ಅವರನ್ನು ಭೇಟಿ ಮಾಡಿದ್ದ ಕ್ಷಣವನ್ನು ಹಾಗೂ ಆ ಸಂದರ್ಭದಲ್ಲಿ 10ನೇ ತರಗತಿಯನ್ನು ಪೂರೈಸಿ ಉದ್ಯೋಗವೊಂದನ್ನು ಗಳಿಸಬೇಕು ಎಂಬ ಆಕೆ ವ್ಯಕ್ತಪಡಿಸಿದ್ದ ಬಯಕೆಯನ್ನು ಸ್ಮರಿಸಿದ್ದಾರೆ.

“ಅವರ ಮಾತಿನಲ್ಲಿ ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರವಿತ್ತು” ಎಂದು ಪಿಣರಾಯಿ ವಿಜಯನ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ವಿಧವೆ ಮತ್ತು ಆರು ಮಕ್ಕಳ ತಾಯಿಯಾಗಿದ್ದ ಕಾರ್ತ್ಯಾಯಿನಿ ಅಲಪ್ಪುಝದ ಹರಿಪಾದ್ ನಗರಸಭೆಯ ನಿವಾಸಿಯಾಗಿದ್ದರು. ತಮ್ಮ ಮಕ್ಕಳನ್ನು ಬೆಳೆಸಲು ಅವರು ದೇವಾಲಯದ ಹೊರ ಆವರಣವನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News