ಖಡ್ಗಮೃಗಗಳಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ!
ಗುವಾಹಟಿ, ಜು. 29: ಅಸ್ಸಾಮ್ ನ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಂಟಿ ಕೊಂಬಿನ ಖಡ್ಗಮೃಗಗಳಿಗೆ ಪ್ರಸಿದ್ಧಿಯಾಗಿರುವುದು ಎಲ್ಲರಿಗೂ ಗೊತ್ತು. ಈಗ ಅದು ಹುಲಿ ಸಂರಕ್ಷಣೆಯಲ್ಲೂ ಹೆಸರು ಮಾಡಿದೆ.
ಹುಲಿಗಳ ಸಾಂದ್ರತೆಯಲ್ಲಿ ಕಾಜಿರಂಗವು ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ‘ಕಾಜಿರಂಗದಲ್ಲಿ ಹುಲಿಗಳ ಸ್ಥಾನಮಾನ, 2024’ ವರದಿ ತಿಳಿಸಿದೆ. ವರದಿಯನ್ನು ಮಂಗಳವಾರ ಅಂತರರಾಷ್ಟ್ರೀಯ ಹುಲಿ ದಿನದಂದು ಬಿಡುಗಡೆಗೊಳಿಸಲಾಯಿತು. ಕಾಜಿರಂಗದಲ್ಲಿ ಪ್ರತಿ 100 ಚದರ ಕಿಲೋಮೀಟರ್ ಗೆ 18 ಹುಲಿಗಳಿವೆ.
103 ದಿನಗಳ ಕಾಲ ನಡೆದ ಕ್ಯಾಮರ ಟ್ರ್ಯಾಪಿಂಗ್ ಸಮೀಕ್ಷೆಯಲ್ಲಿ, 242 ಸ್ಥಳಗಳಲ್ಲಿ 4,011 ಹುಲಿ ಚಿತ್ರಗಳು ದಾಖಲಾಗಿವೆ. ‘ರೈಟ್ ಫ್ಲ್ಯಾಂಕ್ ಸ್ಟ್ರೈಪ್ ಪ್ಯಾಟರ್ನ್’ ಸೂತ್ರವನ್ನು ಬಳಸಿ 148 ವಯಸ್ಕ ಹುಲಿಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 83 ಹೆಣ್ಣು ಹುಲಿಗಳು, 55 ಗಂಡು ಹುಲಿಗಳು. 10 ಹುಲಿಗಳ ಲಿಂಗವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಬಿಸ್ವನಾಥ್ ವೈಲ್ಡ್ಲೈಫ್ ವಿಭಾಗದಲ್ಲಿ, 27 ಹೊಸ ಹುಲಿಗಳನ್ನು ಗುರುತಿಸಲಾಗಿದೆ. ಇವುಗಳು ಹುಲಿಗಳ ಸಂಖ್ಯೆಯಲ್ಲಿ ಆಗಿರುವ ಒಟ್ಟಾರೆ ಹೆಚ್ಚಳಕ್ಕೆ ಕಾರಣವಾಗಿವೆ. ಪೂರ್ವ ಅಸ್ಸಾಮ್ ವನ್ಯಜೀವಿ ವಿಭಾಗದಲ್ಲಿ ಹುಲಿಗಳ ಸಂಖ್ಯೆ 2022ರಲ್ಲಿ ಇದ್ದ 104ರಿಂದ 2024ರಲ್ಲಿ 115ಕ್ಕೆ ಏರಿಕೆಯಾಗಿದೆ. ಆದರೆ, ನಾಗಾಂವ್ ವನ್ಯಜೀವಿ ವಿಭಾಗದಲ್ಲಿ ಹುಲಿಗಳ ಸಂಖ್ಯೆಯು 6ರಲ್ಲೇ ಸ್ಥಿರವಾಗಿದೆ.