ತೆಲಂಗಾಣ | ಕೆಸಿಆರ್ ವಿರುದ್ಧ ದೂರು ನೀಡಿದ್ದ ವ್ಯಕ್ತಿಯ ಹತ್ಯೆ ಪ್ರಕರಣ: ಏಳು ಮಂದಿ ಬಂಧನ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ಅಕ್ರಮವೆಸಗಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ದೂರು ನೀಡಿದ್ದ ವ್ಯಕ್ತಿಯ ಹತ್ಯೆಯ ಸಂಬಂಧ ತೆಲಂಗಾಣದ ಜಯಶಂಕರ್ ಭೂಪಾಲ್ ಪಲ್ಲಿ ಜಿಲ್ಲೆಯಿಂದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಭೂವ್ಯಾಜ್ಯವೊಂದರ ಸಂಬಂಧ ಫೆಬ್ರವರಿ 19ರಂದು ಜಯಶಂಕರ್ ಭೂಪಾಲ್ ಪಲ್ಲಿ ಪಟ್ಟಣದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ರಾಜಲಿಂಗಮೂರ್ತಿ(50)ರನ್ನು ಇರಿದು ಹತ್ಯೆಗೈಯ್ಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮೃತ ರಾಜಲಿಂಗಮೂರ್ತಿ ಹಾಗೂ ಆರೋಪಿಗಳ ನಡುವೆ ಒಂದು ಎಕರೆ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯವಿತ್ತು ಹಾಗೂ ಅವರಿಬ್ಬರೂ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಖರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಶ್ವಾಸಾರ್ಹ ಮಾಹಿತಿಯನ್ನು ಆಧರಿಸಿ ಫೆಬ್ರವರಿ 22ರಂದು ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಚಾಕುಗಳು, ಕಬ್ಬಿಣದ ಸಲಾಕೆ, ಮೊಬೈಲ್ ಫೋನ್ ಗಳು ಹಾಗೂ ಮೋಟಾರ್ ಸೈಕಲ್ ಗಳು ಸೇರಿದಂತೆ ಕೃತ್ಯಕ್ಕೆ ಬಳಕೆಯಾಗಿದ್ದ ಆಯುಧಗಳಿದ್ದ ಜಾಗಕ್ಕೆ ಪೊಲೀಸರನ್ನು ಕರೆದೊಯ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಆರ್ಎಸ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಮಾಜಿ ಮಹಾನಗರ ಪಾಲಿಕೆ ಉಪಾಧ್ಯಕ್ಷ ಸೇರಿದಂತೆ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜಲಿಂಗಮೂರ್ತಿ ಹತ್ಯೆ ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದು, ಮಾಜಿ ಮಹಾನಗರ ಪಾಲಿಕೆ ಉಪಾಧ್ಯಕ್ಷ ಸೇರಿದಂತೆ ಇತರ ಆರು ಮಂದಿ ಆರೋಪಿಗಳು ಈ ಕೃತ್ಯದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೃತ ರಾಜಲಿಂಗಮೂರ್ತಿಯೊಂದಿಗೆ ಮಾಜಿ ಮಹಾನಗರ ಪಾಲಿಕೆ ಉಪಾಧ್ಯಕ್ಷ ಕೂಡಾ ಆಸ್ತಿ ವಿವಾದ ಮತ್ತು ರಾಜಕೀಯ ಹಗೆತನ ಹೊಂದಿದ್ದರು ಎಂದು ಅವರು ತಿಳಿಸಿದ್ದಾರೆ.