×
Ad

ಕೇದರನಾಥ ಚಾರಣ ಮಾರ್ಗದಲ್ಲಿ ಜನಸಂದಣಿ ತಪ್ಪಿಸಲು 'ಟ್ಯಾಕ್ಸಿ ಸೇವೆ ನೀಡಿದ ಆಂಬ್ಯುಲೆನ್ಸ್‌'!

Update: 2025-06-17 14:18 IST
PC : timesofindia.indiatimes.com

ಡೆಹ್ರಾಡೂನ್: ಕೇದಾರನಾಥ ಚಾರಣ ಮಾರ್ಗದಲ್ಲಿ ಸೈರೆನ್ ಹಾಕಿ ಎರಡು ಆಂಬ್ಯುಲೆನ್ಸ್ ಗಳನ್ನು ಮೀಟರ್ ಟ್ಯಾಕ್ಸಿಯಂತೆ ಓಡಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇದರನಾಥ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ತಂಡವು, ಸೋನ್‌ಪ್ರಯಾಗದಲ್ಲಿ ಜನಸಂದಣಿಯನ್ನು ಭೇದಿಸಿ ಬಂದ ಎರಡು ಆಂಬ್ಯುಲೆನ್ಸ್‌ಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಗೌರಿಕುಂಡದ ಕಡೆಗೆ ವೇಗವಾಗಿ ಚಲಿಸುತ್ತಿದ್ದ ವಾಹನಗಳು ವೈದ್ಯಕೀಯ ತುರ್ತುಸ್ಥಿತಿಗೆ ಧಾವಿಸುತ್ತಿರುವಂತೆ ತೋರುತ್ತಿತ್ತು. ಆದರೆ ಅಂದು (ಶನಿವಾರ) ಅಂತಹ ಯಾವುದೇ ಕರೆ ಬಂದಿಲ್ಲ ಅಥವಾ ಯಾವುದೇ ಅಪಘಾತ ವರದಿಯಾಗಿಲ್ಲ. ಗೌರಿಕುಂಡದಿಂದ ಯಾವುದೇ ತೊಂದರೆಯ ಸಂದೇಶವನ್ನೂ ಸ್ವೀಕರಿಸಲಾಗಿಲ್ಲ. ಹೀಗಾಗಿ, ತುರ್ತಾಗಿ ಹೋಗುತ್ತಿರುವ ಆಂಬ್ಯುಲೆನ್ಸ್‌ಗಳು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.

ಪರಿಶೀಲನೆ ವೇಳೆ, ಆಂಬ್ಯುಲೆನ್ಸ್‌ಗಳಲ್ಲಿ ಒಳಗೆ ರೋಗಿಗಳಿಲ್ಲ, ಬದಲಾಗಿ ಯಾತ್ರಿಕರು ಇರುವುದು ಪೊಲೀಸರ ಗಮನಕ್ಕೆ ಬಂದಿದೆ.

ಹರಿದ್ವಾರದ ನಿಖಿಲ್ ವಿಲ್ಸನ್ ಮಾಸಿಹ್ ಮತ್ತು ಅಮ್ರೋಹಾದ ಕೃಷ್ಣ ಕುಮಾರ್ ಎಂಬವರು ಆಂಬ್ಯುಲೆನ್ಸ್‌ಗಳನ್ನು ಚಲಾಯಿಸುತ್ತಿದ್ದು, ಹವಾಮಾನ ನಿಯಂತ್ರಿತ ಮತ್ತು ಐಶಾರಾಮಿ ಮಾದರಿಯ ಆಂಬ್ಯುಲೆನ್ಸ್ ಅನ್ನು ಒಬ್ಬ ಯಾತ್ರಿಕ ಬುಕ್ ಮಾಡಿದ್ದರೆ, ಇನ್ನೊಂದು ಆಂಬ್ಯುಲೆನ್ಸ್‌ ನಲ್ಲಿ, ಇಬ್ಬರು ಪ್ರಯಾಣಿಕರನ್ನು ಕರೆದೊಯ್ಯಲಾಗಿತ್ತು.

ಹರಿದ್ವಾರದಿಂದ ಹತ್ತುವಾಗ, ಚಾಲಕರು ಇನ್ನೂ ಮೂರು ಪ್ರಯಾಣಿಕರನ್ನು ಹತ್ತಿಸಿಕೊಂಡು ಮೀಟರ್ ಟ್ಯಾಕ್ಸಿಯಂತೆ ಓಡಿಸಿದ್ದಾರೆ ಎಂದು ವರದಿಯಾಗಿದೆ.

ಎರಡೂ ವಾಹನಗಳನ್ನು ಆಕ್ರೋ ಸೇತುವೆಯ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಿದ್ದರೆ, ಆಂಬ್ಯುಲೆನ್ಸ್ ಸೋನ್‌ಪ್ರಯಾಗ, ರಾಂಪುರ ಮತ್ತು ರುದ್ರಪ್ರಯಾಗ ಕಡೆಗೆ ಚಲಿಸಬೇಕಿತ್ತು. ಆದರೆ, ಅಸಾಮಾನ್ಯವಾಗಿ ಆಂಬ್ಯುಲೆನ್ಸ್ ಗೌರಿಕುಂಡ್ ಕಡೆಗೆ ಚಲಿಸುತ್ತಿತ್ತು. ಯಾರಾದರೂ ಅಸ್ವಸ್ಥರಾಗಿದ್ದರೆ, ಗೌರಿಕುಂಡ್ ಕಡೆಗೆ ಹೋಗಲು ಯಾವುದೇ ಕಾರಣವಿಲ್ಲ. ಆದ್ದರಿಂದ, ಪೊಲೀಸ್ ತಂಡಕ್ಕೆ ಇದು ತುಂಬಾ ಆಶ್ಚರ್ಯಕರವಾಗಿತ್ತು ಎಂದು ಸೋನ್‌ಪ್ರಯಾಗದ ಪೊಲೀಸ್ ಅಧಿಕಾರಿಯೊಬ್ಬರು TOI ಗೆ ತಿಳಿಸಿದರು.

ಮೂವರು ಮೂಲ ಪ್ರಯಾಣಿಕರು ಸೋನ್‌ಪ್ರಯಾಗದಲ್ಲಿ ಅವರನ್ನು ಪ್ರಶ್ನಿಸುವ ಮೊದಲೇ ಜನಸಂದಣಿಯಲ್ಲಿ ಓಡಿ ಹೋಗಿದ್ದು, ಪೊಲೀಸರು ಇಬ್ಬರೂ ಚಾಲಕರಿಗೆ ಚಲನ್‌ಗಳನ್ನು ನೀಡಿ, ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

ವಾಹನ ಮಾಲೀಕರ ಸೂಚನೆಯಂತೆ ನಾವು ಆಂಬ್ಯುಲೆನ್ಸ್‌ಗಳನ್ನು ಓಡಿಸುತ್ತಿದ್ದೇವೆ, ಆಂಬ್ಯುಲೆನ್ಸ್‌ಗಳನ್ನು ಗೌರಿಕುಂಡ್‌ಗೆ ಕೊಂಡೊಯ್ಯುವುದು ಮಾತ್ರ ನಮ್ಮ ಕೆಲಸ ಎಂದು ಓರ್ವ ಚಾಲಕ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News