×
Ad

ಚಿನ್ನದ ಬೆಲೆ ಗಗನಕ್ಕೆ | ಮದುವೆಗಳಲ್ಲಿ ಮಹಿಳೆಯರು ಮೂರೇ ಆಭರಣ ಧರಿಸಬೇಕು: ಪಂಚಾಯಿತಿ ಹೊಸ ಆದೇಶ!

Update: 2025-10-30 13:36 IST

ಸಾಂದರ್ಭಿಕ ಚಿತ್ರ (AI)

ಡೆಹ್ರಾಡೂನ್‌ (ಉತ್ತರಾಖಂಡ): ಚಿನ್ನದ ಬೆಲೆ ಗಗನಕ್ಕೇರಿರುವ ನಡುವೆ, ಉತ್ತರಾಖಂಡದ ಕಂಧಾರ್ ಹಾಗೂ ಇಂದ್ರಾಣಿ ಗ್ರಾಮಗಳ ಪಂಚಾಯತ್‌ಗಳು ಹೊಸ ರೀತಿಯ ಸಾಮಾಜಿಕ ನಿಯಮ ಜಾರಿಗೆ ತಂದಿವೆ. ಮದುವೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಪಂಚಾಯತ್ ಆದೇಶದ ಪ್ರಕಾರ, ಮಹಿಳೆಯರು ಮದುವೆ ಸಂದರ್ಭಗಳಲ್ಲಿ ಕೇವಲ ಮೂಗುತಿ, ಕಿವಿಯೋಲೆ ಮತ್ತು ಮಂಗಳಸೂತ್ರ ಧರಿಸಲು ಮಾತ್ರ ಅನುಮತಿ ಇರುತ್ತದೆ. ನಿಯಮ ಉಲ್ಲಂಘಿಸಿದರೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

“ಚಿನ್ನದ ಬೆಲೆ ಏರಿಕೆಯಿಂದ ಜನರಲ್ಲಿ ಆರ್ಥಿಕ ಒತ್ತಡ ಹಾಗೂ ಸಾಮಾಜಿಕ ಸ್ಪರ್ಧೆ ಹೆಚ್ಚಾಗಿದೆ. ಸಂಪತ್ತಿನ ಪ್ರದರ್ಶನದ ಸಂಸ್ಕೃತಿಯಿಂದ ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಅಸಮಾನತೆಯನ್ನು ತಗ್ಗಿಸಲು ಈ ನಿರ್ಧಾರ ಕೈಗೊಂಡಿದ್ದೇವೆ,” ಎಂದು ಕಂಧಾರ್ ಗ್ರಾಮದ ಮುಖಂಡ ಅರ್ಜುನ್ ಸಿಂಗ್ ಹೇಳಿದರು.

ಆದರೆ, ಈ ನಿರ್ಧಾರ ಮಹಿಳೆಯರಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ.

“ಮಹಿಳೆಯರ ಆಭರಣ ಧಾರಣೆಗೆ ಮಿತಿ ವಿಧಿಸುವಂತೆಯೇ ಪುರುಷರ ಮದ್ಯ ಸೇವನೆಯ ಮೇಲೂ ನಿಯಂತ್ರಣ ಇರಬೇಕು. ಚಿನ್ನ ಒಂದು ಹೂಡಿಕೆ; ಆದರೆ ಮದ್ಯದಿಂದ ಯಾವ ಲಾಭ?” ಎಂದು ಜೌನ್ಸಾರ್ ನಿವಾಸಿ ಅಮಲಾ ಚೌಹಾಣ್ ಪ್ರಶ್ನಿಸಿದ್ದಾರೆ.

“ಮದುವೆಗಳಲ್ಲಿ ದುಬಾರಿ ಮದ್ಯ ಹಾಗೂ ಉಡುಗೊರೆಗಳ ಪ್ರದರ್ಶನ ಹೆಚ್ಚಾಗಿದೆ. ಖರ್ಚು ಕಡಿಮೆ ಮಾಡುವ ಉದ್ದೇಶ ಇದ್ದರೆ ಮದ್ಯ ಹಾಗೂ ಮಾಂಸದ ಸೇವನೆಯನ್ನು ಸಹ ನಿಷೇಧಿಸಬೇಕು,” ಎಂದು ನಿಶಾ ರಾವುತ್ ಅಭಿಪ್ರಾಯಪಟ್ಟರು.

“ಆಭರಣ ನಿಷೇಧ ಸಕಾರಾತ್ಮಕ ಹೆಜ್ಜೆ, ಆದರೆ ಮಹಿಳೆಯರ ಬೇಡಿಕೆಗಳಿಗೂ ತಕ್ಕ ಗೌರವ ನೀಡಬೇಕು,” ಎಂದು ಗ್ರಾಮ ಹಿರಿಯ ಭೀಮ್ ಸಿಂಗ್ ಚೌಹಾಣ್ ಹೇಳಿದರು.

ಜೌನ್ಸಾರ್ ಪ್ರದೇಶದಲ್ಲಿ ಬಹುತೇಕ ಜನರು ಬಡವರಾಗಿರುವುದರಿಂದ ಈ ನಿರ್ಧಾರ ಸ್ವಾಗತಾರ್ಹ ಎಂದು 80 ವರ್ಷದ ಉಮಾ ಅಭಿಪ್ರಾಯ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News