ಈಡಿ ವಿಚಾರಣೆಗೆ ಕೇಜ್ರಿವಾಲ್ 3ನೇ ಬಾರಿ ಗೈರು
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಅನುಷ್ಠಾನ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲಿಲ್ಲ.
ವಿಚಾರಣೆಗೆ ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯ ನೀಡಿರುವ ಸಮನ್ಸನ್ನು ಅವರು ಉಲ್ಲಂಘಿಸಿರುವುದು ಇದು ಮೂರನೇ ಬಾರಿಯಾಗಿದೆ.
ಬಳಿಕ ಕೇಂದ್ರೀಯ ತನಿಖಾ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಈ ಸಂಸ್ಥೆಯು ‘‘ಅಪಾರದರ್ಶಕವಾಗಿ ಮತ್ತು ಸ್ವೇಚ್ಛಾಚಾರದಿಂದ ಕೆಲಸ ಮಾಡುತ್ತಿದೆ’’ ಎಂದು ಆರೋಪಿಸಿದರು. ‘‘ನನ್ನ ಪ್ರತಿಷ್ಠೆಯನ್ನು ಹಾಳು ಮಾಡುವುದಕ್ಕಾಗಿ ಅದು ಪದೇ ಪದೇ ಸಮನ್ಸ್ ಗಳನ್ನು ಕಳುಹಿಸುತ್ತಿದೆಯೇ” ಎಂಬುದಾಗಿಯೂ ಅವರು ಪ್ರಶ್ನಿಸಿದರು.
ವಿಚಾರಣೆಗೆ ಗೈರುಹಾಜರಾದ ಬಳಿಕ, ಅನುಷ್ಠಾನ ನಿರ್ದೇಶನಾಲಯಕ್ಕೆ ಪತ್ರವೊಂದನ್ನು ಬರೆದ ಕೇಜ್ರಿವಾಲ್, ‘‘ಪ್ರತಿ ಬಾರಿ, ಸಮನ್ಸ್ ನನ್ನನ್ನು ತಲುಪುವ ಮೊದಲೇ ಅದು ಮಾಧ್ಯಮಗಳ ಬಳಿ ಇರುತ್ತದೆ. ಇದು, ಸಮನ್ಸ್ ಗಳ ಉದ್ದೇಶ ಯಾವುದಾದರೂ ಕಾನೂನುಬದ್ಧ ತನಿಖೆಯನ್ನು ನಡೆಸುವುದೇ ಅಥವಾ ನನ್ನ ಪ್ರತಿಷ್ಠೆಯನ್ನು ಹಾಳುಮಾಡುವುದೇ ಎನ್ನುವ ಪ್ರಶ್ನೆಯನ್ನು ಎತ್ತುತ್ತದೆ’’ ಎಂದು ಹೇಳಿದ್ದಾರೆ.
ಅನುಷ್ಠಾನ ನಿರ್ದೇಶನಾಲಯವು ನನಗೆ ಕಳುಹಿಸುತ್ತಿರುವ ಸಮನ್ಸ್ ಗಳಿಗೆ ನಾನು ಕಾನೂನು ಆಕ್ಷೇಪಗಳನ್ನು ಸಲ್ಲಿಸಿದರೂ, ಅದರ ಬಗ್ಗೆ ತನಿಖಾ ಸಂಸ್ಥೆಯು ಯಾಕೆ ಮೌನವಾಗಿದೆ ಎಂಬುದಾಗಿಯೂ ಕೇಜ್ರಿವಾಲ್ ಪ್ರಶ್ನಿಸಿದರು.
‘‘ವಿಚಾರಣೆಗೆ ವೈಯಕ್ತಿಕವಾಗಿ ಹಾಜರಾಗುವಂತೆ ಸೂಚಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನೀವು ಸಮನ್ಸ್ ಗಳನ್ನು ಕಳುಹಿಸುತ್ತಿದ್ದೀರಿ. ಆದರೆ, ಸಮನ್ಸ್ ಗಳಲ್ಲಿ ಇರುವ ದೋಷಗಳು ಮತ್ತು ಕಾನೂನು ಆಕ್ಷೇಪಗಳನ್ನು ನಾನು ನಿಮ್ಮ ಗಮನಕ್ಕೆ ಪದೇ ಪದೇ ತಂದರೂ, ನೀವು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ಕಳವಳದ ವಿಷಯವಾಗಿದೆ’’ ಎಂದು ದಿಲ್ಲಿ ಮುಖ್ಯಮಂತ್ರಿ ತನ್ನ ಪತ್ರದಲ್ಲಿ ಬರೆದಿದ್ದಾರೆ.
‘‘ಹಾಗಾಗಿ, ನಿಮ್ಮ ಸಮನ್ಸ್ ಗಳಲ್ಲಿ ಯಾವುದೇ ವಸ್ತುನಿಷ್ಠ, ಸಹಜ, ನ್ಯಾಯೋಚಿತ ಅಥವಾ ನಿಷ್ಪಕ್ಷ ತನಿಖೆ ಅಥವಾ ವಿಚಾರಣೆಗಳನ್ನು ನಡೆಸುವ ಉದ್ದೇಶದ ಬದಲಿಗೆ, ಸ್ಥಾಪಿತ ಹಿತಾಸಕ್ತಿಗಳು ಮತ್ತು ಬಾಹ್ಯ ಹಾಗೂ ದುರುದ್ದೇಶಪೂರಿತ ಉದ್ದೇಶಗಳಿವೆ ಎಂಬ ನನ್ನ ಕಳವಳಗಳನ್ನು ನಿಮ್ಮ ಮೌನ ಸಾಬೀತುಪಡಿಸುತ್ತಿದೆ’’ ಎಂದು ಅವರು ಬರೆದಿದ್ದಾರೆ.
ಅನುಷ್ಠಾನ ನಿರ್ದೇಶನಾಲಯವು ಏಕ ಕಾಲದಲ್ಲಿ ನ್ಯಾಯಾಧೀಶ, ನ್ಯಾಯ ಮಂಡಳಿ ಮತ್ತು ಅನುಷ್ಠಾನ ಸಂಸ್ಥೆಯ ಪಾತ್ರಗಳನ್ನು ವಹಿಸುತ್ತಿದೆಯೇ ಎಂಬುದಾಗಿಯೂ ಅವರು ಪ್ರಶ್ನಿಸಿದ್ದಾರೆ. ‘‘ಕಾನೂನಿನ ಆಡಳಿತವಿರುವ ನಮ್ಮ ದೇಶದಲ್ಲಿ ನಿಮ್ಮ ಈ ಧೋರಣೆ ನಡೆಯುವುದಿಲ್ಲ’’ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮೊದಲು ನವೆಂಬರ್ 2 ಮತ್ತು ಡಿಸೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವರಿಗೆ ಅನುಷ್ಠಾನ ನಿರ್ದೇಶನಾಲಯವು ಸಮನ್ಸ್ ನೀಡಿತ್ತು. ಆ ವಿಚಾರಣೆಗಳಿಗೆ ಕೇಜ್ರಿವಾಲ್ ಹಾಜರಾಗಿರಲಿಲ್ಲ.
ಯಾವ ನೆಲೆಯಲ್ಲಿ ವಿಚಾರಣೆಗೆ ಕರೆಸಲಾಗಿದೆ ಎನ್ನುವುದು ಸಷ್ಟವಾಗಿಲ್ಲ :
ನನ್ನನ್ನು ಯಾವ ನೆಲೆಯಲ್ಲಿ- ಸಾಕ್ಷಿಯಾಗಿಯೋ ಅಥವಾ ಶಂಕಿತನಾಗಿಯೋ- ವಿಚಾರಣೆಗೆ ಕರೆಯಲಾಗಿದೆ ಎನ್ನುವುದು ಸಮನ್ಸ್ ಗಳಿಂದ ಸ್ಪಷ್ಟವಾಗುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನನ್ನನ್ನು ಯಾಕೆ ಕರೆಯಲಾಗುತ್ತಿದೆ ಎನ್ನುವುದನ್ನು ಸಮನ್ಸ್ನಲ್ಲಿ ತಿಳಿಸಲಾಗಿಲ್ಲ ಎಂದಿದ್ದಾರೆ.
‘ಗಾಳ ಹಾಕುತ್ತಾ ದೋಣಿ ನಡೆಸುವ’ ರೀತಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನುವಂತೆ ಸಮನ್ಸ್ ಗಳಿಂದ ಭಾಸವಾಗುತ್ತಿದೆ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯಲ್ಲಿ ಕೇಜ್ರಿವಾಲ್ ರನ್ನು ಪ್ರಚಾರದಿಂದ ಹೊರಗಿಡಲು ಬಿಜೆಪಿ ಪಿತೂರಿ: ಆಪ್
ಲೋಕಸಭಾ ಚುನಾವಣೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಚಾರ ಮಾಡುವುದನ್ನು ತಡೆಯುವುದಕ್ಕಾಗಿ ಅವರನ್ನು ಬಂಧಿಸಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಪಿತೂರಿ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಬುಧವಾರ ಆರೋಪಿಸಿದೆ.
ಅನುಷ್ಠಾನ ನಿರ್ದೇಶನಾಲಯದ ಸಮನ್ಸ್ ಗಳು ‘‘ರಾಜಕೀಯ ದ್ವೇಷ ಸಾಧನೆಯಾಗಿದೆ’’ ಎಂದು ಆಪ್ ನಾಯಕಿ ಹಾಗೂ ದಿಲ್ಲಿ ಸಚಿವೆ ಆತಿಶಿ ಬಣ್ಣಿಸಿದರು. ತನ್ನನ್ನು ಯಾಕೆ ವಿಚಾರಣೆಗೆ ಕರೆಯಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿರುವ ಮನವಿಗಳಿಗೆ ಅನಿಷ್ಠಾನ ನಿರ್ದೇಶನಾಲಯವು ಪ್ರತಿಕ್ರಿಯಿಸಿಲ್ಲ ಎಂದು ಅವರು ಹೆಳಿದರು.
‘‘ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ನಡೆಸಲು ಅನುಷ್ಠಾನ ನಿರ್ದೇಶನಾಲಯ ಮತ್ತು ಸಿಬಿಐಗಳನ್ನು ಬಿಜೆಪಿಯು ರಾಜಕೀಯ ಅಸ್ತ್ರಗಳನ್ನಾಗಿ ಮಾಡಿಕೊಂಡಿದೆ’’ ಎಂದು ಅವರು ಆರೋಪಿಸಿದರು.