×
Ad

ನಕಲಿ ಪ್ರಕರಣದಲ್ಲಿ ಕೇಜ್ರಿವಾಲ್ ರನ್ನು ಬಿಜೆಪಿಯು ಸಿಬಿಐ ಮೂಲಕ ಬಂಧಿಸಿದೆ: ಆಪ್

Update: 2024-06-26 21:28 IST

ಅರವಿಂದ್‌ ಕೇಜ್ರಿವಾಲ್ | PC : PTI 

ಹೊಸದಿಲ್ಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟಿನಿಂದ ಜಾಮೀನು ದೊರಕುವ ಸಾಧ್ಯತೆ ಇದ್ದುದರಿಂದ ಬಿಜೆಪಿ ಗಾಬರಿಗೊಂಡಿದೆ ಹಾಗೂ ನಕಲಿ ಪ್ರಕರಣದಲ್ಲಿ ಅವರನ್ನು ಸಿಬಿಐ ಮೂಲಕ ಬಂಧಿಸಿದೆ ಎಂದು ಆಮ್ ಆದ್ಮಿ ಪಕ್ಷ ಬುಧವಾರ ಆರೋಪಿಸಿದೆ.

ಇಂದು ಬೆಳಗ್ಗೆ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಔಪಚಾರಿಕವಾಗಿ ಬಂಧಿಸಲು ದಿಲ್ಲಿ ನ್ಯಾಯಾಲಯ ಸಿಬಿಐಗೆ ಅನುಮತಿ ನೀಡಿತು. ವಿಶೇಷ ನ್ಯಾಯಾಧೀಶ ಅಮಿತಾಭ್ ರಾವತ್ ಆದೇಶ ನೀಡಿದ ಬಳಿಕ ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸಿತು.

ಎಕ್ಸ್ನ ಪೋಸ್ಟ್ನಲ್ಲಿ ಆಮ್ ಆದ್ಮಿ ಪಕ್ಷ, ಸರ್ವಾಧಿಕಾರಿ ಕ್ರೌರ್ಯದ ಎಲ್ಲಾ ಮಿತಿಯನ್ನು ನೀರಿದ್ದಾರೆ. ಇಂದು ಅರವಿಂದ್‌ ಕೇಜ್ರಿವಾಲ್ ಅವರು ಜಾಮೀನು ಪಡೆಯುವ ಎಲ್ಲಾ ಸಾಧ್ಯತೆ ಇದ್ದುದರಿಂದ ಬಿಜೆಪಿ ಗಾಬರಿಗೊಂಡಿತು ಹಾಗೂ ನಕಲಿ ಪ್ರಕರಣದಲ್ಲಿ ಸಿಬಿಐ ಮೂಲಕ ಬಂಧಿಸಿತು ಎಂದು ಹೇಳಿದೆ.

ಸಿಬಿಐ ಕೇಜ್ರಿವಾಲ್ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆದೊಯ್ದಿತು. ಅಲ್ಲಿ ಅವರ ರಕ್ತದ ಸಕ್ಕರೆಯ ಪ್ರಮಾಣ ತುಂಬಾ ಕಡಿಮೆಯಾಯಿತು. ನೀವು ಎಷ್ಟೇ ದಬ್ಬಾಳಿಕೆ ಮಾಡಿದರೂ ಪರವಾಗಿಲ್ಲ. ಕೇಜ್ರಿವಾಲ್ ಅವರು ತಲೆ ಬಾಗಲಾರರು ಎಂದು ಅದು ಹೇಳಿದೆ.

ಜಾರಿ ನಿರ್ದೇಶನಾಲಯ(ಈಡಿ) ತನಿಖೆ ನಡೆಸುತ್ತಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಮಾರ್ಚ್ 21ರಂದು ಬಂಧಿತರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಲು ಸುಪ್ರೀಂ ಕೋರ್ಟ್ ಮೇ 10ರಂದು ಕೇಜ್ರಿವಾಲ್ ಅವರಿಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಅನಂತರ ಅವರು ಜೂನ್ 2ರಂದು ಕಾರಾಗೃಹಕ್ಕೆ ಹಿಂದಿರುಗಿದ್ದರು.

ದಿಲ್ಲಿ ಅಬಕಾರಿ ನೀತಿಯ ರಚನೆ ಹಾಗೂ ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಸಿಬಿಐಗೆ ಶಿಫಾರಸು ಮಾಡಿದ್ದರು. ಅನಂತರ ಕೇಜ್ರಿವಾಲ್ ಸರಕಾರ ದಿಲ್ಲಿ ಅಬಕಾರಿ ನೀತಿ-2020-21 ಅನ್ನು 2022 ಜುಲೈನಲ್ಲಿ ಹಿಂಪಡೆದುಕೊಂಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News