ಕೇಜ್ರಿವಾಲ್ ಗೆ ದೀರ್ಘ ಸಮಯದವರೆಗೆ ಈ.ಡಿ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ದಿಲ್ಲಿ ಬಿಜೆಪಿ ಅಧ್ಯಕ್ಷ ಟೀಕೆ
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ಅಬಕಾರಿ ನೀತಿಗೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜಾರಿನಿರ್ದೇಶನಾಲಯದ ಸಮನ್ಸ್ ಅನ್ನು ತಪ್ಪಿಸಿಕೊಂಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಶನಿವಾರ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಕಿಡಿಕಾರಿದ್ದಾರೆ. ಕೇಜ್ರಿವಾರ್ ದೀರ್ಘಸಮಯದವರೆಗೆ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ‘‘ಆರಂಭದಲ್ಲಿ ವಿಚಾರಣೆಯನ್ನು ತಪ್ಪಿಸಲು ಕೇಜ್ರಿವಾಲ್ ಚುನಾವಣೆಗಳ ನೆಪವನ್ನು ಹೇಳಿದರು. ಆನಂತರ ಅವರು ವಿಪಶ್ಶನ ಧ್ಯಾನದ ಕಾರಣ ನೀಡಿದರು. ಜನವರಿ 3ರಂದು ನಿಗದಿತವಾಗಿರುವ ವಿಚಾರಣೆಗೆ ದಿಲ್ಲಿ ಮುಖ್ಯಮಂತ್ರಿಯವರು ಯಾವ ಕಾರಣ ನೀಡುತ್ತಾರೆಂಬುದನ್ನು ನೋಡೋಣ. ಅವರಿಗೆ ದೀರ್ಘ ಸಮಯದವರೆಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರು ಈ.ಡಿ. ಮುಂದೆ ಹಾಜರಾಗಲೇ ಬೇಕಾಗುತ್ತದೆ’’ಎಂದು ಬಿಜೆಪಿ ನಾಯಕ ಸಚ್ದೇವ ಹೇಳಿದ್ದಾರೆ.
‘‘ದಿಲ್ಲಿಯ ಆಸ್ಪತ್ರೆಗಳಲ್ಲಿ ನಕಲಿ ಔಷಧಿಗಳನ್ನು ನೀಡಲಾಗುತ್ತಿದೆ. ಜನರು ಮಾಲಿನ್ಯದಿಂದ ತೊಂದರೆಗೀಡಾಗಿದ್ದಾರೆ. ಇಂತಹ ಸಮಯದಲ್ಲಿ ದಿಲ್ಲಿ ಮುಖ್ಯಮಂತ್ರಿಯವರು ಆನಂತ ಶಾಂತಿಯ ಹುಡುಕಾಟದಲ್ಲಿದ್ದಾರೆ. ಅವರು ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಆದರೆ ದಿಲ್ಲಿ ಜನತೆಯ ಕಥೆ ಏನಾಯಿತು? ’’ ಎಂದವರು ಹೇಳಿದರು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ಅವರನ್ನು ಜನವರಿ ಮೂರರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಮೂರನೆ ಬಾರಿಗೆ ಸಮನ್ಸ್ ನೀಡಿದೆ. ಅವರಿಗೆ ಈ ಮೊದಲು ಡಿಸೆಂಬರ್ 18ರಂದು ಈಡಿ ಸಮನ್ಸ್ ಜಾರಿಗೊಳಿಸಿದ್ದು, ಡಿಸೆಂಬರ್ 21ರಂದು ಫೆಡರಲ್ ಏಜೆನ್ಸಿಯ ಕಚೇರಿಯಲ್ಲಿ ಹಾಜರಾಗಬೇಕೆಂದು ಸೂಚಿಸಿತ್ತು. ಆದರೆ ಹಾಜರಗಿರಲಿಲ್ಲ. ಇದಕ್ಕೂ ಮುನ್ನ ಅವರನ್ನು ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಲು ತಿಳಿಸಿತ್ತು. ಆದರೆ ಅವುಗಳನ್ನು ನಿರಾಕರಿಸಿದ್ದರು. ತನ್ನ ವಿರುದ್ಧ ಹೊರಿಸಲಾದ ಆರೋಪಗಳು ಅಸ್ಪಷ್ಟ, ದುರುದ್ದೇಶಪೂರಿತ ಹಾಗೂ ಕಾನೂನಿನ ದೃಷ್ಟಿಯಲ್ಲಿ ಸುಸ್ಥಿರವಾದುದಲ್ಲವೆಂದು ಹೇಳಿದ್ದರು.