×
Ad

ಕಾರಾಗೃಹದಲ್ಲಿ ಹದಗೆಡುತ್ತಿರುವ ಕೇಜ್ರಿವಾಲ್ ಆರೋಗ್ಯ | ಜು. 30ರಂದು ‘ಇಂಡಿಯಾ’ ಮೈತ್ರಿಕೂಟದಿಂದ ರ‍್ಯಾಲಿ

Update: 2024-07-25 22:43 IST

 ಅರವಿಂದ ಕೇಜ್ರಿವಾಲ್ |PC : PTI

ಹೊಸದಿಲ್ಲಿ : ತಿಹಾರ್ ಕಾರಾಗೃಹದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆರೋಗ್ಯ ಹದಗೆಡುತ್ತಿರುವ ಕುರಿತು ಧ್ವನಿ ಎತ್ತಲು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಇಲ್ಲಿನ ಜಂತರ್ ಮಂತರ್‌ನಲ್ಲಿ ಜುಲೈ 30ರಂದು ರ‍್ಯಾಲಿ ನಡೆಸಲಿದೆ ಎಂದು ಆಪ್ ಗುರುವಾರ ತಿಳಿಸಿದೆ.

ಕಾರಾಗೃಹದಲ್ಲಿ ಕೇಜ್ರಿವಾಲ್ ಅವರನ್ನು ಹತ್ಯೆಗೈಯಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಅಲ್ಲದೆ, ಕೇಜ್ರಿವಾಲ್ ಅವರ ಸಕ್ಕರೆ ಪ್ರಮಾಣ ಜೂನ್ 3 ಹಾಗೂ ಜುಲೈ 7ರ ನಡುವೆ 26 ಬಾರಿ ಇಳಿಕೆಯಾಗಿರುವುದನ್ನು ತೋರಿಸುವ ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕೇಜ್ರಿವಾಲ್ ಪ್ರಾಣದೊಂದಿಗೆ ಆಟ ಆಡುತ್ತಿದ್ದಾರೆ ಎಂದು ‘ಇಂಡಿಯಾ’ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಆಪ್ ಆರೋಪಿಸಿದೆ.

ಕೇಜ್ರಿವಾಲ್ ಆರೋಗ್ಯ ಹದಗೆಡುತ್ತಿರುವ ಕುರಿತು ಧ್ವನಿ ಎತ್ತಲು ಇಂಡಿಯಾ ಮೈತ್ರಿಕೂಟ ಜಂತರ್ ಮಂತರ್‌ನಲ್ಲಿ ಜುಲೈ 30ರಂದು ಬೃಹತ್ ರ‍್ಯಾಲಿ ನಡೆಸಲಿದೆ ಎಂದು ಆಪ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಆತಿಶಿ, ‘‘ಬಿಜೆಪಿ ದಿಲ್ಲಿಯ ಜನರ ವಿರುದ್ಧ ಎಲ್ಲಾ ರೀತಿಯಲ್ಲೂ ಪಿತೂರಿ ನಡೆಸುತ್ತಿದೆ. ದಿಲ್ಲಿಯ ಜನರಿಗಾಗಿ ಕೆಲಸ ಮಾಡುತ್ತಿದ್ದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದೆ’’ ಎಂದು ಪ್ರತಿಪಾದಿಸಿದ್ದಾರೆ.

ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಸಿಗುತ್ತದೆ ಎಂದು ಬಿಜೆಪಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಅದು ಕೇಜ್ರಿವಾಲ್‌ ರನ್ನು ಸಿಬಿಐಯಿಂದ ಬಂಧಿಸಿತು ಎಂದು ಆತಿಶಿ ಪ್ರತಿಪಾದಿಸಿದ್ದಾರೆ.

‘‘ಕೇಜ್ರಿವಾಲ್ ಅವರಿಗೆ ಕಳೆದ 30 ವರ್ಷಗಳಿಂದ ಸಕ್ಕರೆ ಕಾಯಿಲೆ ಇರುವುದು ಅವರಿಗೆ ತಿಳಿದಿದೆ. ಕಸ್ಟಡಿಯಲ್ಲಿ ಅವರ ತೂಕ 8.5 ಕೆ.ಜಿ. ಇಳಿಕೆಯಾಗಿದೆ. ಇಡೀ ದಿನ ಗ್ಲೂಕೋಮೀಟರ್ ಅವರ ಸಕ್ಕರೆ ಪ್ರಮಾಣವನ್ನು ಪರಿಶೀಲಿಸುತ್ತದೆ. ಈ ಸಾಧನದ ದತ್ತಾಂಶವನ್ನು ಲೆಫ್ಟಿನೆಂಟ್ ಗರ‍್ನರ್ ಹಾಗೂ ಕೇಂದ್ರದೊಂದಿಗೆ ಹಂಚಿಕೊಳ್ಳಲಾಗಿದೆ. ಕೇಜ್ರಿವಾಲ್ ಅವರ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿದೆ ಎಂದು ಅವರಿಗೆ ತಿಳಿದಿದೆ’’ ಎಂದು ಆತಿಶಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News