ಕೀನ್ಯಾದಲ್ಲಿ ರಸ್ತೆ ಅಪಘಾತ : ಐವರು ಕೇರಳಿಗರು ಮೃತ್ಯು
pc : x
ನೈರೋಬಿ: ಪ್ರವಾಸಿಗರು ಸಂಚರಿಸುತ್ತಿದ್ದ ಬಸ್‌ವೊಂದು ನಿಯಂತ್ರಣ ಕಳೆದುಕೊಂಡು ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ, ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿ ಪ್ರವಾಸಿಗರು ಮೃತಪಟ್ಟಿರುವ ಘಟನೆ ಈಶಾನ್ಯ ಕೀನ್ಯಾದ ನ್ಯಾಂದರುವ ಪ್ರಾಂತ್ಯದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕತರ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ, “ಕತರ್‌ನಿಂದ ಕೀನ್ಯಾ ಭೇಟಿಗೆಂದು ತೆರಳಿದ್ದ 28 ಮಂದಿ ಭಾರತೀಯರ ಗುಂಪು ಪ್ರಯಾಣಿಸುತ್ತಿದ್ದ ಬಸ್ ನಿನ್ನೆ ಅಪಘಾತಕ್ಕೀಡಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಅಪಘಾತದಲ್ಲಿ ಐವರು ಭಾರತೀಯರು ಮೃತಪಟ್ಟಿದ್ದಾರೆ” ಎಂದು ಹೇಳಿದೆ.
ಈದ್ ರಜಾ ದಿನದ ಪ್ರಯುಕ್ತ ಈ ಗುಂಪು ಕತರ್‌ನಿಂದ ಕೀನ್ಯಾಗೆ ಪ್ರಯಾಣಿಸುತ್ತಿದ್ದಾಗ ಸೋಮವಾರ ಮಧ್ಯಾಹ್ನದ ವೇಳೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೃತಪಟ್ಟವರನ್ನು ತಿರುವಲ್ಲ ನಿವಾಸಿ ಗೀತಾ ಶೋಜಿ ಐಸಾಕ್, ಪಾಲಕ್ಕಾಡ್ ನಿವಾಸಿ ರಿಯಾ(41) ಹಾಗೂ ಅವರ ಏಳೂ ವರ್ಷದ ಪುತ್ರಿ ತಾಯಿರ ಹಾಗೂ ತ್ರಿಶೂರ್ ನಿವಾಸಿಗಳಾದ ಜಸ್ನಾ ಹಾಗೂ ಅವರ ಪುತ್ರಿ ರೂಹಿ ಮೆಹ್ರಿನ್ ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಹಲವು ಬಾರಿ ಪಲ್ಟಿ ಹೊಡೆದಿದೆ. ಈ ಅಪಘಾತದಲ್ಲಿ ಗಾಯಗೊಂಡಿರುವ 27 ಮಂದಿಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸುಧಾರಿತ ವೈದ್ಯಕೀಯ ಆರೈಕೆಗಾಗಿ ನೈರೋಬಿಯದ ಆಸ್ಪತ್ರೆಯೊಂದಕ್ಕೆ ಸಾಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.