ಕೇರಳದಲ್ಲಿ ಮತ್ತೆ ಮುಂಗಾರಿನ ಆರ್ಭಟ: ಆರೆಂಜ್ ಆಲರ್ಟ್ ಘೋಷಣೆ
PC : PTI
ತಿರುವನಂತಪುರ: ಕೇರಳದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಗುರುವಾರ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಎರ್ನಾಕುಲಂ,ಇಡುಕ್ಕಿ ಹಾಗೂ ತ್ರಿಶೂರು ಜಿಲ್ಲೆಗಳು ಜಲಾವೃತಗೊಂಡಿವೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಹವಾಮಾನ ಇಲಾಖೆಯು ಆರೆಂಜ್ ಆಲರ್ಟ್ ಘೋಷಿಸಿದೆ.
ಕೊಲ್ಲಂ, ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ತ್ರಿಶೂರು ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಮೂರು ತಾಸುಗಳ ಕಾಲ ಆರೆಂಜ್ ಆಲರ್ಟ್ ಘೋಷಿಸಲಾಗಿತ್ತು. 11 ಸೆಂ.ಮೀ.ಗಳಿಂದ 20 ಸೆಂ.ಮೀ.ವರೆಗೆ ಭಾರೀ ಮಳೆಯಾಗು ಸಾಧ್ಯತೆಯಿದ್ದಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗುತ್ತದೆ.
ಈ ಮಧ್ಯೆ ಕಳೆದ ವರ್ಷದ ಮಳೆಗಾಲದಲ್ಲಿ ಭೀಕರ ಭೂಕುಸಿತಕ್ಕೆ ಸಾಕ್ಷಿಯಾದ ವಯನಾಡ್ ಜಿಲ್ಲೆಯ ಮುಂಡಕ್ಕೈ-ಚೂರಾನ್‌ಮಲ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಚೂರಾಲ್‌ಮಲ ನದಿಯು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ಮಣ್ಣುಮಿಶ್ರಿತವಾದ ನದಿ ನೀರು ಬಿರುಸಿನಿಂದ ಹರಿಯುತ್ತಿದ್ದು, ಬೈಲೆಯಿ ಸೇತುವೆಯ ಸಮೀಪದ ದಡಗಳು ಒಡೆದುಹೋಗಿವೆ.
2025ರ ಜುಲೈನಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಮನೆಗಳು ನಾಶವಾಗಿದ್ದವು.