ಕೇರಳ: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊರ್ವ ಬಲಿ
ಸಾಂದರ್ಭಿಕ ಚಿತ್ರ
ಮಲಪ್ಪುರಂ, ಸೆ. 8: ಅಪರೂಪ ಹಾಗೂ ಮಾರಕ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್‌ಗೆ ಕೇರಳದಲ್ಲಿ ಸೋಮವಾರ ಮತ್ತೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಆಗಸ್ಟ್‌ನಿಂದ ಇಲ್ಲಿವರೆಗೆ ಮೆದುಳಿನ ಸೋಂಕಿಗೆ ಮೃತಪಟ್ಟವರ ಸಂಖ್ಯೆ 5ಕ್ಕೆ ತಲುಪಿದೆ.
ಮಲಪ್ಪುರಂ ಜಿಲ್ಲೆಯ ವಂಡೂರಿನ ನಿವಾಸಿಯಾಗಿರುವ ಶೋಭನಾ (54) ಮೆದುಳಿನ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಕೋಝಿಕ್ಕೋಡ್ ಜಿಲ್ಲೆಯ ಸಮೀಪದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ವಯನಾಡ್‌ನ ಸುಲ್ತಾನ್ ಬತ್ತೇರಿಯ ನಿವಾಸಿ ರತೀಶ್ (45) ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಆಗಸ್ಟ್ ನಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್ ನಿಂದ ಮೂವರು ಸಾವನ್ನಪ್ಪಿದ್ದಾರೆ. ಈ ರೋಗದ ಲಕ್ಷಣ ಇರುವ ಹಲವರು ಕೊಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಕಲುಷಿತ ನೀರಿನಲ್ಲಿ ವಾಸಿಸುವ ಅಮೀಬಾದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್‌ಗೆ ಚಿಕಿತ್ಸೆ ನೀಡಲು ಇತ್ತೀಚೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
ಕಲುಷಿತ ನೀರಿನಲ್ಲಿ ಈಜುವುದರಿಂದ ಅಥವಾ ಸ್ನಾನ ಮಾಡುವುದರಿಂದ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್ ಸೋಂಕು ಉಂಟಾಗುತ್ತದೆ. ಕೇರಳದಲ್ಲಿ ಈ ವರ್ಷ ಒಟ್ಟು 42 ಪ್ರಕರಣಗಳು ವರದಿಯಾಗಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.