ಕೇರಳ | ಸಾಗರೋತ್ತರ ಶಿಕ್ಷಣ ಸಂಸ್ಥೆಗೆ 3.5 ಕೋಟಿ ರೂ.ವಂಚನೆ ಹಗರಣ : ಇನ್ನೋರ್ವ ಆರೋಪಿ ಬಂಧನ
ಸಾಂದರ್ಭಿಕ ಚಿತ್ರ
ಕೊಚ್ಚಿ,ಅ.30: ಸಾಗರೋತ್ತರ ಶಿಕ್ಷಣ ಸಂಸ್ಥೆಯೊಂದರಲ್ಲಿ 3.5 ಕೋಟಿ ರೂ. ವಂಚನೆ ಹಗರಣಕ್ಕೆ ಸಂಬಂಧಿಸಿ ಕೇರಳದ ಎರ್ನಾಕುಲಂ ಪೊಲೀಸರು ಗುರುವಾರ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಿಶೋರ್ ಕುಮಾರ್ ರಾಯಿಮೊಲ್ ಬಂಧಿತ ಆರೋಪಿಯಾಗಿದ್ದು, ಆತ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಒಟ್ಟು 13 ಮಂದಿಯನ್ನು ಹೆಸರಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾದ ಸುಜಿತ್ ಜೈಲಿನಲ್ಲಿಯೇ ಉಳಿದುಕೊಂಡಿದ್ದಾರೆ. ರಾಯಿಮೋಲ್ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದು, ಉಳಿದ ಆರೋಪಿಗಳನ್ನು ಪೊಲೀಸರು ಇನ್ನಷ್ಟೇ ಸೆರೆಹಿಡಿಯಬೇಕಿದೆ.
ಪ್ರಮುಖ ಆರೋಪಿಯಾದ ಸುಜಿತ್ 2018ರಲ್ಲಿ ಈ ಸಾಗರೋತ್ತರ ಶಿಕ್ಷಣ ಸಂಸ್ಥೆಯಲ್ಲಿ ಆಫೀಸ್‌ಬಾಯ್ ಆಗಿ ಸೇರ್ಪಡೆಗೊಂಡಿದ್ದನು. ತ್ವರಿತವಾಗಿ ಆಡಳಿತವರ್ಗದ ವಿಶ್ವಾಸವನ್ನು ಪಡೆದುಕೊಂಡ ಆತ ಹಣಕಾಸು ಸೇರಿದಂತೆ ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸುವಂತಹ ಸ್ಥಾನಮಾನ ಪಡೆದುಕೊಂಡಿದ್ದನು.
ಕಾಲಕ್ರಮೇಣ ಸುಜಿತ್ ಹಾಗೂ ಆತನ ಸಂಗಡಿಗರು ಹಣಕಾಸು ನಿಧಿಗಳನ್ನು ಬೇರೆಡೆಗೆ ತಿರುಗಿಸತೊಡಗಿದರು. ಕಂಪೆನಿಯ ದಾಖಲೆಗಳನ್ನು ಸೋರಿಕೆ ಮಾಡಿದ ಆತ, ಪ್ರತಿಸ್ಪರ್ಧಿ ಸಂಸ್ಥೆಗಳನ್ನು ರಚಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸಿದ್ದರು.
ಪ್ರಕರಣದ ಇನ್ನೋರ್ವ ಆರೋಪಿ ರಾಯಿಮೋಲ್ ಸುಜಿತ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದ. ಕಳವುಗೈಯಲಾದ ಕಂಪೆನಿಯ ಮಾಹಿತಿಯನ್ನು ಬಳಸಿಕೊಂಡು ಪರ್ಯಾಯ ಉದ್ಯಮವನ್ನು ಸೃಷ್ಟಿಸುವ ರಾಯಿಮೋಲ್ ಪ್ರಮುಖ ಪಾತ್ರ ವಹಿಸಿದ್ದನೆನ್ನಲಾಗಿದೆ. ಹಲವು ತಿಂಗಳುಗಳ ತನಿಖೆಯ ಬಳಿಕ ತಿರುವನಂತಪುರದಲ್ಲಿ ಆತನನ್ನು ಬಂಧಿಸಲಾಗಿದೆ.
ಹಣಕಾಸು ಅವ್ಯವಹಾರದ ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹಲವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.