×
Ad

ಕೇರಳ : ಹಸಿವು ತಡೆಯಲಾರದೆ ಬೆಕ್ಕಿನ ಮಾಂಸ ಸೇವಿಸಿದ ಯುವಕ

Update: 2024-02-04 20:45 IST

Photo:newsable.asianetnews.com

ಮಲಪ್ಪುರಂ: ಹಸಿವು ತಡೆಯಲಾರದ ಯುವಕನೋರ್ವ ಬೆಕ್ಕಿನ ಮಾಂಸ ಸೇವಿಸಿದ ಘಟನೆ ಉತ್ತರ ಕೇರಳ ಜಿಲ್ಲೆಯ ಕುಟ್ಟಿಪುರಂನಲ್ಲಿ ನಡೆದಿದೆ.

ಕುಟ್ಟಿಪುರಂನ ಜನನಿಬಿಡ ಬಸ್ಸ್ಟ್ಯಾಂಡ್ನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಬೆಕ್ಕಿನ ಮಾಂಸ ಸೇವಿಸಿದ ಯುವಕ ಅಸ್ಸಾಂನ ದುಬ್ರಿ ಜಿಲ್ಲೆಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಇಲ್ಲಿನ ಸ್ಥಳೀಯ ರೈಲು ನಿಲ್ದಾಣದಲ್ಲಿ ಯುವಕನೋರ್ವ ಬೆಕ್ಕಿನ ಮಾಂಸ ಸೇವಿಸುತ್ತಿದ್ದಾನೆ ಎಂದು ನಾವು ಮಾಹಿತಿ ಸ್ವೀಕರಿಸಿದೆವು. ಕೂಡಲೇ ಅಲ್ಲಿಗೆ ಧಾವಿಸಿದೆವು. ಆತನ ಬಗ್ಗೆ ವಿಚಾರಣೆ ನಡೆಸಿದೆವು. ಆತ ಕಳೆದ 5 ದಿನಗಳಿಂದ ಏನನ್ನೂ ತಿಂದಿಲ್ಲ ಎಂದು ತಿಳಿಸಿದ. ಆಹಾರ ತಂದು ಕೊಟ್ಟಾಗ ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಂಡ’’ ಎಂದು ಪೊಲೀಸರು ಹೇಳಿದ್ದಾರೆ.

ಆತ ಅಸ್ಸಾಂನ ಕಾಲೇಜು ವಿದ್ಯಾರ್ಥಿ, ಕುಟುಂಬಕ್ಕೆ ಮಾಹಿತಿ ನೀಡದೆ ಆತ ಡಿಸೆಂಬರ್ ನಲ್ಲಿ ರೈಲಿನಲ್ಲಿ ಕೇರಳಕ್ಕೆ ತಲುಪಿದ್ದ ಎಂಬುದು ಆತನ ಹೇಳಿಕೆಯಿಂದ ತಿಳಿದು ಬಂದಿದೆ. ಆತ ಚೆನ್ನೈಯಲ್ಲಿ ಕೆಲಸ ಮಾಡುತ್ತಿರುವ ತನ್ನ ಸಹೋದರನ ಫೋನ್ ನಂಬರ್ ನೀಡಿದ್ದು, ನಾವು ಆತನ ಸಹೋದರನನ್ನು ಸಂಪರ್ಕಿಸಿದೆವು. ಇದರಿಂದ ಆತ ನೀಡಿದ ಮಾಹಿತಿ ಸತ್ಯ ಎಂಬುದು ದೃಢಪಟ್ಟಿತು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ಬಳಿಕ ಆತನನ್ನು ತ್ರಿಶೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಆತನಿಗೆ ಯಾವುದೇ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಇಲ್ಲ. ಆತನ ಕುಟುಂಬಿಕರು ಇಲ್ಲಿಗೆ ಆಗಮಿಸಿದಾಗ ಆವರೊಂದಿಗೆ ಕಳುಹಿಸಿ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News