ವಿವಿಗಳಲ್ಲಿ ಕುಲಪತಿಗಳ ನೇಮಕಾತಿ ಕರಡು ಕಾನೂನಿನ ವಿರುದ್ಧ ಕೇರಳ ವಿಧಾನಸಭೆ ನಿರ್ಣಯ
ಪಿಣರಾಯಿ ವಿಜಯನ್ | PC : PTI
ತಿರುವನಂತಪುರ: ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಕರಡು ನಿಯಮಾವಳಿ 2025 ಅನ್ನು ಹಿಂತೆಗೆದುಕೊಳ್ಳಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಮಂಗಳವಾರ ಅವಿರೋಧವಾಗಿ ಅಂಗೀಕರಿಸಿತು.
ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕಕ್ಕೆ 6 ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಲು ರಾಜ್ಯಪಾಲರುಗಳಿಗೆ ಅಧಿಕಾರ ನೀಡುವ ನಿಯಮಾವಳಿಯನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರಕಾರವು ಜನವರಿ 6ರಂದು ಪ್ರಸ್ತಾವನೆಯೊಂದನ್ನು ಬಿಡುಗಡೆಗೊಳಿಸಿತ್ತು.
ಕುಲಪತಿ ಹುದ್ದೆಗಳಿಗೆ ಕೇವಲ ಶಿಕ್ಷಣತಜ್ಞರನ್ನೇ ನೇಮಕಗೊಳಿಸುವ ನಿಯಮವನ್ನು ಕೈಬಿಟ್ಟು ಕೈಗಾರಿಕಾ ತಜ್ಞರು ಹಾಗೂ ಸಾರ್ವಜನಿಕ ವಲಯದ ನಿವೃತ್ತ ಅಧಿಕಾರಿಗಳನ್ನು ಕೂಡಾ ನೇಮಿಸಲು ಅವಕಾಶ ನೀಡುವುದನ್ನು ಕರಡು ನಿಯಮಾವಳಿಯಲ್ಲಿ ಪ್ರಸ್ತಾವಿಸಲಾಗಿದೆ.
ಸದನದಲ್ಲಿ ನಿರ್ಣಯವನ್ನು ಮಂಡಿಸಿ ಮಾತನಾಡಿದ ಪಿಣರಾಯಿ ವಿಜಯನ್ ಅವರು ಈ ವಿವಾದಿತ ಕರಡು ನಿಯಮಗಳ ಬಗ್ಗೆ ರಾಜ್ಯ ಸರಕಾರಗಳು ಮತ್ತು ಶೈಕ್ಷಣಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದರು.
ಪ್ರತಿಯೊಂದು ರಾಜ್ಯದ ವಿಶ್ವವಿದ್ಯಾನಿಲಯಗಳು ಆಯಾ ರಾಜ್ಯದ ವಿಧಾನಸಭೆಯು ಅಂಗೀಕರಿಸಿದ ಕಾನೂನುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕೆಂದು ಪಿಣರಾಯಿ ಪ್ರತಿಪಾದಿಸಿದರು. ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಕಾನೂನುಗನ್ನು ಜಾರಿಗೊಳಿಸುವ ಯಾವುದೇ ನಡೆಯು ಭಾರತದ ಒಕ್ಕೂಟ ಸಂರಚನೆಯನ್ನೇ ಕಡೆಗಣಿಸಿದಂತಾಗುತ್ತದೆ ಎಂದು ವಿಜಯನ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ವಿಶ್ವವಿದ್ಯಾನಿಲಯದ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಕರಡು ನಿಯಮಾವಳಿಯನ್ನು ಪ್ರತಿಪಕ್ಷಗಳ ಆಡಳಿತವಿರುವ ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ಕೇರಳ ರಾಜ್ಯಗಳು ವಿರೋಧಿಸುತ್ತಿವೆ. ಈ ರಾಜ್ಯಗಳ ಸರಕಾರಗಳು, ವಿವಿಗಳ ಕುಲಾಧಿಪತಿಗಳಾದ ರಾಜ್ಯಪಾಲರ ಜೊತೆಗೆ ಸಂಘರ್ಷವನ್ನು ನಡೆಸಿದ್ದವು. ಈ ವರ್ಷದ ಜನವರಿ 9ರಂದು ತಮಿಳುನಾಡು ವಿಧಾನಸಭೆ ಕೂಡಾ ವಿಶ್ವವಿದ್ಯಾನಿಲಯದ ಕರಡು ನಿಯಮಾವಳಿಗಳನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಿತ್ತು.