ಪ್ರಧಾನಿ ಮೋದಿಗೆ ಅವಮಾನ ಆರೋಪ: ರ‍್ಯಾಪರ್ ವೇಡನ್ ವಿರುದ್ಧ ಎನ್ಐಎಗೆ ದೂರು ನೀಡಿದ ಬಿಜೆಪಿ ಕೌನ್ಸಿಲರ್
ರ‍್ಯಾಪರ್ ವೇಡನ್ (Photo credit: madhyamamonline.com)
ತಿರುವನಂತಪುರಂ: ರ‍್ಯಾಪರ್ ವೇಡನ್ ಹಾಡಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಕೇರಳ ಬಿಜೆಪಿ NIAಗೆ ದೂರು ನೀಡಿದೆ.
ವೇಡನ್ ವಿರುದ್ಧ ಪಾಲಕ್ಕಾಡ್ ಪುರಸಭೆಯ ಕೌನ್ಸಿಲರ್ ಮಿನಿ ಕೃಷ್ಣಕುಮಾರ್ ಎನ್ಐಎ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ವೇಡನ್ ಬಿಡುಗಡೆ ಮಾಡಿದ 'ವಾಯ್ಸ್ ಆಫ್ ವಾಯ್ಸ್‌ಲೆಸ್ (Voice of Voiceless)' ಹಾಡಿನ ಸಾಹಿತ್ಯಕ್ಕೆ ಸಂಬಂಧಿಸಿ ದೂರನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ದೂರಿನ ಪ್ರಕಾರ, ಹಾಡಿನಲ್ಲಿ ʼಹುಸಿ ರಾಷ್ಟ್ರೀಯತಾವಾದಿʼಎಂದು ಹೇಳುವ ಸಾಲುಗಳಿವೆ. ಈ ಸಾಲುಗಳು ಪ್ರಧಾನಿಗೆ ಉದ್ದೇಶಪೂರ್ವಕವಾಗಿ ಮಾಡಿರುವ ಅವಮಾನ ಎಂದು ಮಿನಿ ದೂರಿನಲ್ಲಿ ಆರೋಪಿಸಿದ್ದಾರೆ. ಹಾಡಿನ ಹಿಂದಿನ ಉದ್ದೇಶದ ಬಗ್ಗೆ ಕೇಂದ್ರೀಯ ಸಂಸ್ಥೆಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿ ಕೌನ್ಸಿಲರ್ ಮಿನಿ ಕೃಷ್ಣಕುಮಾರ್, ಒಂದು ದೇಶದ ಪ್ರಧಾನಿಯನ್ನು ಹುಸಿ ರಾಷ್ಟ್ರೀಯವಾದಿ ಎಂದು ಕರೆಯುವುದು ಸ್ವೀಕಾರಾರ್ಹವಲ್ಲ. ಬೇರೆ ಯಾವುದೇ ದೇಶದಲ್ಲಿ ಇದನ್ನು ಪ್ರೋತ್ಸಾಹಿಸಲಾಗುವುದಿಲ್ಲ. ಓರ್ವ ಕಲಾವಿದ ಇಡೀ ಸಮಾಜದ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದ್ದಾನೆ. ಈ ಹಾಡು ತಪ್ಪು ಮಾಹಿತಿಯನ್ನು ಹರಡುತ್ತದೆ ಎಂದು ಆರೋಪಿಸಿದರು.