×
Ad

ಕೇರಳ: ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ನಾಲ್ವರ ಮೃತ್ಯು, ವಯನಾಡಿನಲ್ಲಿ ರೆಡ್ ಅಲರ್ಟ್

Update: 2024-07-18 19:53 IST

ಸಾಂದರ್ಭಿಕ ಚಿತ್ರ | PTI 

ತಿರುವನಂತಪುರ: ಕೇರಳದಲ್ಲಿ ಬುಧವಾರ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಇನ್ನೂ ನಾಲ್ವರು ಮೃತಪಟ್ಟಿದ್ದು, ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆ 10ಕ್ಕೇರಿದೆ.

ಭಾರತೀಯ ಹವಾಮಾನ ಇಲಾಖೆಯು ವಯನಾಡಿನಲ್ಲಿ ರೆಡ್ ಅಲರ್ಟ್ ಮತ್ತು ಇತರ ಎಂಟು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಹೊರಡಿಸಿದೆ. ರಾಜ್ಯದಲ್ಲಿಯ ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ತಿರುವನಂತಪುರ ಜಿಲ್ಲೆಯ ಮರಿಯಾಪುರಂ ಸಮೀಪ ಸಮುದ್ರದಲ್ಲಿ ದೋಣಿಯೊಂದು ಮಗುಚಿದ ಪರಿಣಾಮ ಮೀನುಗಾರ ಅಲೋಷಿಯಸ್ (45) ಮೃತಪಟ್ಟಿದ್ದರೆ, ಇಡುಕ್ಕಿ ಜಿಲ್ಲೆಯ ಮಂಕುಳಮ್‌ನಲ್ಲಿ ನದಿಯಲ್ಲಿ ಮುಳುಗಿ ಸನೀಶ್ (23) ಮೃತಪಟ್ಟಿದ್ದಾನೆ. ಅಲಪ್ಪುಳದಲ್ಲಿ ಮೈಮೇಲೆ ಮರ ಬಿದ್ದು ಉನೈಝ್ (28) ಸಾವನ್ನಪ್ಪಿದ್ದರೆ, ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಬುಧವಾರ ಪಾಲಕ್ಕಾಡ್‌ನಲ್ಲಿಯ ನದಿಯಲ್ಲಿ ಪತ್ತೆಯಾಗಿದೆ.

ರಾಜ್ಯಾದ್ಯಂತ ಮರಗಳು ಬುಡಮೇಲಾಗುತ್ತಿರುವ ಘಟನೆಗಳು ವರದಿಯಾಗಿದ್ದು, ಮಂಗಳವಾರ ರಾತ್ರಿ ತಿರುವನಂತಪುರದಲ್ಲಿ ಕಾರಿನ ಮೇಲೆ ಮರವೊಂದು ಬಿದ್ದು ಮಹಿಳೆಯೋರ್ವರು ಮೃತಪಟ್ಟಿದ್ದರು.

ಅಧಿಕಾರಿಗಳು ಭೂಕುಸಿತದ ಅಪಾಯವಿರುವ ಪ್ರದೇಶಗಳಲ್ಲಿಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News