ಸಿಪಿಐ ಒತ್ತಡಕ್ಕೆ ಮಣಿದ ಸಿಪಿಎಂ : ಪರಿಶೀಲನೆವರೆಗೆ ಪಿಎಂ ಶ್ರೀ ಅನುಷ್ಠಾನ ಸ್ಥಗಿತಗೊಳಿಸಿದ ಕೇರಳ ಸರಕಾರ
ಪಿಣರಾಯಿ ವಿಜಯನ್ | PC : PTI
ತಿರುವನಂತಪುರಂ: ಕೇರಳದಲ್ಲಿ ಆಡಳಿತರೂಢ ಸಿಪಿಎಂ ನೇತೃತ್ವದ ಎಡರಂಗದ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯದ ಬೆನ್ನಲ್ಲೆ ಕೇಂದ್ರ ಸರಕಾರದ ಪಿಎಂ ಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯ ಅನುಷ್ಠಾನವನ್ನು ಪರಿಶೀಲನೆವರೆಗೆ ಸ್ಥಗಿತಗೊಳಿಸಲು ಕೇರಳ ಸರಕಾರ ನಿರ್ಧರಿಸಿದೆ ಎಂದು deccanherald ವರದಿ ಮಾಡಿದೆ.
ಏಳು ಮಂದಿ ಸದಸ್ಯರ ಸಂಪುಟ ಉಪಸಮಿತಿಯು ಯೋಜನೆಯನ್ನು ಪರಿಶೀಲಿಸಲಿದ್ದು, ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗಾರರಿಗೆ ತಿಳಿಸಿದರು. ಉಪಸಮಿತಿಯ ಪರಿಶೀಲನೆಯ ನಂತರ ಪಿಎಂ ಶ್ರೀ ಕುರಿತು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವಾಲಯಕ್ಕೆ ಪತ್ರ ಕಳುಹಿಸಲಾಗುವುದು ಎಂದು ತಿಳಿಸಿದರು.
"ಈ ಬಗ್ಗೆ ಪರಿಶೀಲನೆಗೆ ನಿರ್ಧರಿಸಿರುವುದರಿಂದ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತರುವ ಅಗತ್ಯವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದ ಮೇಲೆ ಆರೆಸ್ಸೆಸ್ ಕಾರ್ಯಸೂಚಿಯನ್ನು ಹೇರುವ ಪ್ರಯತ್ನವಾಗಿದೆ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ ಎಂದು ವಿಜಯನ್ ಹೇಳಿದರು.
ಕೇಂದ್ರದೊಂದಿಗೆ ಪಿಎಂ ಶ್ರೀ ಒಪ್ಪಂದಕ್ಕೆ ಸಹಿ ಹಾಕುವ ರಾಜ್ಯ ಸರಕಾರದ ನಿರ್ಧಾರದ ಬಗ್ಗೆ ಸಿಪಿಎಂ ಮತ್ತು ಸಿಪಿಐ ರಾಷ್ಟ್ರೀಯ ನಾಯಕತ್ವಗಳು ಅಸಮಾಧಾನ ವ್ಯಕ್ತಪಡಿಸಿವೆ.