×
Ad

‘ವಿಭಜನೆಯ ಭಯಾನಕತೆಗಳ ಸ್ಮರಣಾರ್ಥ ದಿನ’ ಆಚರಣೆಗೆ ವಿವಿಗಳಿಗೆ ಕೇರಳ ರಾಜ್ಯಪಾಲರ ಸೂಚನೆ; ವಿವಾದ ಸೃಷ್ಟಿ

Update: 2025-08-12 16:04 IST

ಕೇರಳ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ (Photo: PTI)

ತಿರುವನಂತಪುರ: ಕೇರಳ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅವರು ಆ.14ನ್ನು ‘ವಿಭಜನೆಯ ಭಯಾನಕತೆಗಳ ಸ್ಮರಣಾರ್ಥ ದಿನ’ವನ್ನಾಗಿ ಆಚರಿಸುವಂತೆ ರಾಜ್ಯದಲ್ಲಿಯ ವಿವಿಗಳಿಗೆ ಸೂಚಿಸಿದ್ದು, ಇದು ವಿವಾದವನ್ನು ಹುಟ್ಟುಹಾಕಿದೆ.

ಕೇರಳದ ವಿವಿಗಳ ಕುಲಪತಿಗಳಿಗೆ ರಾಜ್ಯಪಾಲರು ಹೊರಡಿಸಿರುವ ಸುತ್ತೋಲೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಈ ನಿರ್ದೇಶನವು ಅಸಾಂವಿಧಾನಿಕವಾಗಿದೆ ಮತ್ತು ಸ್ವೀಕಾರಾರ್ಹವಲ್ಲ. ಕೇರಳವು ತನ್ನ ವಿವಿಗಳ ಕ್ಯಾಂಪಸ್‌ಗಳನ್ನು ಸಂಘ ಪರಿವಾರದ ವಿಭಜಕ ಕಾರ್ಯಸೂಚಿಗೆ ವೇದಿಕೆಗಳನ್ನಾಗಿ ಪರಿವರ್ತಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಆ.15ನ್ನು ಉಲ್ಲೇಖಿಸಿದ ಅವರು, ಸ್ವಾತಂತ್ರ್ಯ ಚಳುವಳಿಯಲ್ಲಿ ಯಾವುದೇ ಪಾತ್ರವನ್ನು ಹೊಂದಿರದ ಮತ್ತು ಬ್ರಿಟಿಷ್ ಆಡಳಿತಕ್ಕೆ ಸೇವೆ ಸಲ್ಲಿಸಿದ್ದ ಸಂಘ ಪರಿವಾರವು ಈಗ ವಿಭಜಕ ಕಾರ್ಯಸೂಚಿಯನ್ನು ಉತ್ತೇಜಿಸುವ ಮೂಲಕ ಸ್ವಾತಂತ್ರ್ಯ ದಿನದ ಮಹತ್ವವನ್ನು ಕುಂದಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರೂ ರಾಜ್ಯಪಾಲರ ನಿರ್ಧಾರವನ್ನು ಅಸಾಂವಿಧಾನಿಕ ಎಂದು ಟೀಕಿಸಿದ್ದು, ಹೀಗೆ ಮಾಡುವ ಮೂಲಕ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಅವರು(ಆರ್ಲೇಕರ್) ತಾನು ಈಗಲೂ ಆರೆಸ್ಸೆಸ್‌ನ ವಿಭಜಕ ರಾಜಕೀಯವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಕೇರಳಕ್ಕೆ ತಿಳಿಸುತ್ತಿದ್ದಾರೆ ಎಂದು ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

ರಾಜ್ಯಪಾಲರು ಕುಲಪತಿಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ,ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಆ.14ನ್ನು ‘ವಿಭಜನೆಯ ಭಯಾನಕತೆಗಳ ಸ್ಮರಣಾರ್ಥ ದಿನ’ ಎಂದು ಘೋಷಿಸಲಾಗಿದೆ ಮತ್ತು ಈ ಸಂದರ್ಭವನ್ನು ಸ್ಮರಿಸಲು ಶಿಕ್ಷಣ ಸಂಸ್ಥೆಗಳು ವಿಚಾರ ಸಂಕಿರಣಗಳನ್ನು ಆಯೋಜಿಸಬಹುದು. ವಿಭಜನೆ ಎಷ್ಟೊಂದು ಭಯಾನಕವಾಗಿತ್ತು ಎನ್ನುವುದನ್ನು ಜನರಿಗೆ ತಿಳಿಸಲು ಈ ವಿಷಯದಲ್ಲಿ ನಾಟಕಗಳನ್ನು ಪ್ರದರ್ಶಿಸಬಹುದು ಎಂದು ತಿಳಿಸಲಾಗಿದೆ.

ರಾಜ್ಯಪಾಲರು ಕೇರಳದಲ್ಲಿಯ ಎಲ್ಲ ವಿವಿಗಳ ಪದನಿಮಿತ್ತ ಕುಲಾಧಿಪತಿಗಳಾಗಿದ್ದಾರೆ.

ಆ.14ರ ಸುಮಾರಿಗೆ ಪ್ರದರ್ಶನಗಳನ್ನು ಆಯೋಜಿಸುವಂತೆ ಕಾಲೇಜುಗಳು ಮತ್ತು ವಿವಿಗಳಿಗೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ(ಯುಜಿಸಿ)ದ 2022ರ ನಿರ್ದೇಶನಕ್ಕೆ ಅನುಗುಣವಾಗಿ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಹೇಳಲಾಗಿದೆ.

ಆ.14ನ್ನು ವಿಭಜನೆಯ ಭಯಾನಕತೆಗಳ ಸ್ಮರಣಾರ್ಥ ದಿನ ಎಂದು ಆಚರಿಸಲಾಗುವುದು ಎಂದು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಬಳಿಕ 2022ರ ಯುಜಿಸಿ ನಿರ್ದೇಶನವು ಹೊರಬಿದ್ದಿತ್ತು.

1947ರಲ್ಲಿ ಬ್ರಿಟಿಷ್ ಆಡಳಿತದ ಭಾರತವನ್ನು ಭಾರತ ಮತ್ತು ಪಾಕಿಸ್ತಾನ, ಹೀಗೆ ಎರಡು ಸ್ವತಂತ್ರ ದೇಶಗಳನ್ನಾಗಿ ವಿಭಜಿಸಲಾಗಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಬಲವಂತದಿಂದ ತಮ್ಮ ಮನೆಗಳನ್ನು ತೊರೆಯುವಂತಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News