ಆಸ್ಪತ್ರೆಯಲ್ಲಿ ಮುಂಗಡ ಪಾವತಿಸದಿದ್ದರೂ ತುರ್ತು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ, ದರ ಪಟ್ಟಿ ಪ್ರದರ್ಶಿಸಬೇಕು: ಕೇರಳ ಹೈಕೋರ್ಟ್ ಖಡಕ್ ನಿರ್ದೇಶನ
ಕೇರಳ ಹೈಕೋರ್ಟ್ | Photo Credit : PTI
ತಿರುವನಂತಪುರ: ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ಜೀವ ರಕ್ಷಿಸುವ ಚಿಕಿತ್ಸೆಯನ್ನು ನೀಡುವುದು ಪ್ರತಿಯೊಂದು ವೈದ್ಯಕೀಯ ಸಂಸ್ಥೆಯ ಮೊದಲ ಕರ್ತವ್ಯ. ಮುಂಗಡ ಪಾವತಿ ಮಾಡಿಲ್ಲ, ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣವನ್ನು ನೆಪವಾಗಿಸಿಕೊಂಡು ಯಾವುದೇ ಆಸ್ಪತ್ರೆಯೂ ತುರ್ತು ರೋಗಿಗೆ ಚಿಕಿತ್ಸೆ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಸ್ಯಾಮ್ ಕುಮಾರ್ ವಿ.ಎಂ ಅವರಿದ್ದ ವಿಭಾಗೀಯ ಪೀಠವು ಬುಧವಾರ ನೀಡಿದ ತೀರ್ಪಿನಲ್ಲಿ, ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಯನ್ನು ತಕ್ಷಣ ಪರೀಕ್ಷಿಸಿ, ಸೂಕ್ತ ಆರೈಕೆ ನೀಡಬೇಕು. ಅಗತ್ಯವಿದ್ದರೆ ‘ಉನ್ನತ ಕೇಂದ್ರಕ್ಕೆ’ ಸುರಕ್ಷಿತವಾಗಿ ಸ್ಥಳಾಂತರಿಸುವ ಜವಾಬ್ದಾರಿಯನ್ನು ಆಸ್ಪತ್ರೆಗಳು ನಿರ್ವಹಿಸಬೇಕು ಎಂದು ಸೂಚಿಸಿದೆ.
ರೋಗಿಯನ್ನು ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಡಿಸ್ಚಾರ್ಜ್ ಸಾರಾಂಶದೊಂದಿಗೆ ಇಸಿಜಿ, ಎಕ್ಸ್–ರೇ, ಸಿಟಿ ಸ್ಕ್ಯಾನ್ ಮತ್ತು ಇತರೆ ಎಲ್ಲಾ ವರದಿಗಳನ್ನು ನೀಡುವುದನ್ನು ಖಾತರಿಪಡಿಸಬೇಕು ಎಂದು ಪೀಠ ಹೇಳಿದೆ. ಇದನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಕೇರಳ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆ, 2018 ಮತ್ತು ಅದರ ನಿಯಮಗಳು ಅಸ್ಪಷ್ಟ ಅಥವಾ ಅಸಮಾನವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಈ ಕಾಯ್ದೆಯನ್ನು ಪ್ರಶ್ನಿಸಿ ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘ (IMA) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಕಾಯ್ದೆ ಜಾಗತಿಕ ಮಾನದಂಡಗಳಿಗೆ ಸರಿಹೊಂದುತ್ತದೆ ಎಂಬುದನ್ನು ನ್ಯಾಯಾಲಯವು ಉಲ್ಲೇಖಿಸಿದೆ.
ಪಾರದರ್ಶಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಪ್ರತಿಯೊಂದು ಆಸ್ಪತ್ರೆಯೂ ನೀಡುವ ಸೇವೆಗಳ ಪಟ್ಟಿ, ಸಾಮಾನ್ಯವಾಗಿ ನಡೆಸುವ ಚಿಕಿತ್ಸೆಗಳ ಮೂಲ ಮತ್ತು ಪ್ಯಾಕೇಜ್ ದರಗಳು, ಅನಿರೀಕ್ಷಿತ ತೊಡಕುಗಳು ಹಾಗೂ ಹೆಚ್ಚುವರಿ ಕಾರ್ಯವಿಧಾನಗಳ ವಿವರಗಳನ್ನು ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಸ್ವಾಗತ ಕೌಂಟರ್ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿಗಳು ಸುಲಭವಾಗಿ ಕಾಣುವಂತೆ ಇರಬೇಕು ಎಂದು ಸೂಚಿಸಲಾಗಿದೆ. ಕುಂದುಕೊರತೆ ಅಧಿಕಾರಿಯ ಹೆಸರು, ಫೋನ್ ಸಂಖ್ಯೆ, ಇಮೇಲ್, ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಾಯವಾಣಿ ಮುಂತಾದ ವಿವರಗಳನ್ನೂ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಪ್ರದರ್ಶಿಸಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಆಸ್ಪತ್ರೆಗೆ ಪ್ರವೇಶಿಸುವ ಕ್ಷಣದಲ್ಲೇ ಪ್ಯಾಕೇಜ್ ದರಗಳು, ಅಡ್ಮಿಶನ್ ಶುಲ್ಕ, ಬಿಲ್ಲಿಂಗ್ ನಿಯಮ, ಡಿಸ್ಚಾರ್ಜ್ ಪ್ರಕ್ರಿಯೆ, ಆಂಬ್ಯುಲೆನ್ಸ್ ಶುಲ್ಕ, 24×7 ತುರ್ತು ಸೇವಾ ಮಾರ್ಗಸೂಚಿಗಳು ಹಾಗೂ ಕುಂದುಕೊರತೆ ಪರಿಹಾರ ವಿಧಾನಗಳ ಬಗ್ಗೆ ರೋಗಿ ಅಥವಾ ಸಂಬಂಧಿಕರಿಗೆ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಸಂಪೂರ್ಣ ಮಾಹಿತಿ ನೀಡುವ ಜವಾಬ್ದಾರಿ ಆಸ್ಪತ್ರೆಗಳದ್ದಾಗಿದೆ. ದೂರುಗಳನ್ನು 7 ಕೆಲಸದ ದಿನಗಳಲ್ಲಿ ಬಗೆಹರಿಸುವ ಪ್ರಯತ್ನ ನಡೆಯಬೇಕು. ಬಗೆಹರಿಯದ ಅಥವಾ ಗಂಭೀರ ದೂರುಗಳನ್ನು ಜಿಲ್ಲಾ ನೋಂದಣಿ ಪ್ರಾಧಿಕಾರಕ್ಕೆ ತಕ್ಷಣ ತಿಳಿಸಬೇಕು ಎಂದು ಪೀಠ ಸೂಚಿಸಿದೆ. ಭೌತಿಕ ಅಥವಾ ಡಿಜಿಟಲ್ ರೂಪದಲ್ಲಿ ದೂರು ರಿಜಿಸ್ಟರ್ ಇರಿಸುವುದು ಕಡ್ಡಾಯ ಎಂದು ನ್ಯಾಯಾಲಯ ತಿಳಿಸಿದೆ.
ರೋಗಿಗಳು ಸೇವಾ ಕೊರತೆಯ ವಿರುದ್ಧ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ದೂರು ನೀಡುವ ಹಕ್ಕು, ಆಪಾದಿತ ವಂಚನೆ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸುವ ಹಕ್ಕು, ಗಂಭೀರ ಕುಂದುಕೊರತೆಗಳನ್ನು ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಿಳಿಸುವ ಅವಕಾಶ, ಹಾಗೂ ಕಾನೂನು ಸೇವಾ ಪ್ರಾಧಿಕಾರಗಳಿಂದ ಸಹಾಯ ಪಡೆಯುವ ಅವಕಾಶಗಳನ್ನೂ ಹೈಕೋರ್ಟ್ ಪುನರುಚ್ಚರಿಸಿದೆ. ಎಲ್ಲಾ ಪಾವತಿಗಳಿಗೂ ಆಸ್ಪತ್ರೆಗಳು ರಶೀದಿ ನೀಡುವುದು ಕಡ್ಡಾಯ ಎಂದು ನ್ಯಾಯಾಲಯವು ಹೇಳಿದೆ.
ಈ ತೀರ್ಪಿನಲ್ಲಿ ನೀಡಿರುವ ಮಾರ್ಗಸೂಚಿಗಳ ಬಗ್ಗೆ ರಾಜ್ಯ ಸರ್ಕಾರವು ಮಲಯಾಳಂ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಒಂದು ತಿಂಗಳ ಕಾಲ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಸಾಮಾನ್ಯ ಜನರು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ತಮ್ಮ ಹಕ್ಕುಗಳನ್ನು ಅರಿತುಕೊಳ್ಳಲು ಇದು ಅಗತ್ಯ ಕ್ರಮವೆಂದು ಪೀಠ ಅಭಿಪ್ರಾಯಪಟ್ಟಿದೆ.
ಸೌಜನ್ಯ: thehindu.com