×
Ad

ಕೇರಳ: ಆರೆಸ್ಸೆಸ್ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ | ಯುವ ಕಾಂಗ್ರೆಸ್, ಡಿವೈಎಫ್‌ಐ ಕಾರ್ಯಕರ್ತರಿಂದ ಪ್ರತಿಭಟನೆ

Update: 2025-10-16 21:36 IST

ಆನಂದು ಅಜಿ |Photo: Instagram/ anantwo_aji

ಕೊಟ್ಟಾಯಂ, ಅ. 16: ಇಪ್ಪತ್ತಾರು ವರ್ಷದ ಆರೆಸ್ಸೆಸ್ ಕಾರ್ಯಕರ್ತ ಆನಂದು ಅಜಿ ಸಾವಿಗೆ ಸಂಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ಹಾಗೂ ಡಿವೈಎಫ್‌ಐ ಕಾರ್ಯಕರ್ತರು ಇಲ್ಲಿ ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಕೊಟ್ಟಾಯಂ ಜಿಲ್ಲೆಯ ತಂಪಲಕ್ಕಾಡ್‌ನ ಸಾಫ್ಟ್‌ವೇರ್ ಎಂಜಿನಿಯರ್ ಅಜಿ ತಿರುವನಂತಪುರ ತಂಪನೂರು ಲಾಡ್ಜ್‌ ನಲ್ಲಿ ಅಕ್ಟೋಬರ್ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು ಹಾಗೂ ಆರೆಸ್ಸೆಸ್‌ನೊಂದಿಗೆ ದೀರ್ಘ ಕಾಲ ಸಂಪರ್ಕವಿದ್ದ ಕುಟುಂಬದಿಂದ ಬಂದವರಾಗಿದ್ದರು.

ಅಜಿ ಸಾವಿಗೆ ಆರೆಸ್ಸೆಸ್ ಕಾರ್ಯಕರ್ತ ನಿಧೀಶ್ ಮುರಳೀಧರನ್ ಕಾರಣ ಎಂದು ಆರೋಪಿಸಿ ಹಾಗೂ ಅವರನ್ನು ಬಂಧಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಪೊನ್ಕುನ್ನಂನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದೆ. ಅಲ್ಲದೆ, ಕೊಟ್ಟಾಯಂನ ಕೆಲವು ನಾಯಕರ ವಿರುದ್ಧ ತನಿಖೆ ನಡೆಸುವಂತೆ ಕೂಡ ಆಗ್ರಹಿಸಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಫ್‌ಐ ಸದಸ್ಯರು ಕಂಜಿರಪ್ಪಳ್ಳಿ ಸಮೀಪದ ಕಪ್ಪಡದಲ್ಲಿರುವ ಮುರಳೀಧರನ್ ಅಂಗಡಿಗೆ ರ್ಯಾಲಿ ನಡೆಸಿದರು. ಅಲ್ಲದೆ, ಅಂಗಡಿಯನ್ನು ಮುಚ್ಚಿದರು. ಅದರ ಎದುರಿದ್ದ ಸೈನ್‌ಬೋರ್ಡ್ ಹಾನಿ ಉಂಟು ಮಾಡಿದರು.

ಈ ನಡುವೆ ಪೊಲೀಸರು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಂಜಿರಪಳ್ಳಿಯಲ್ಲಿರುವ ಉಪ ಪೊಲೀಸ್ ಅಧೀಕ್ಷಕರ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ತಡೆದರು, ಬಂಧಿಸಿದರು ಹಾಗೂ ಸ್ಥಳದಿಂದ ತೆರವುಗೊಳಿಸಿದರು.

ಅಜಿ ಅವರು ಮುರಳೀಧರನ್ ಹೆಸರು ಉಲ್ಲೇಖಿಸಿದ ಹೊರತಾಗಿಯೂ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಒ.ಜೆ. ಜನೀಶ್ ಆರೋಪಿಸಿದ್ದಾರೆ.

ಅಜಿ 15 ಪುಟಗಳ ಸುಸೈಡ್ ನೋಟ್ ಬರೆದಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಸುಸೈಡ್ ನೋಟ್‌ನಲ್ಲಿ ‘ಎನ್‌ಎಂ’ ಎಂಬ ವ್ಯಕ್ತಿಯನ್ನು ಉಲ್ಲೇಖಿಸಿದ್ದಾರೆ. ‘ಎನ್‌ಎಂ’ ಪದೇ ಪದೇ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಅನಂತರ ಅಜಿ ತನ್ನ ವೀಡಿಯೊದಲ್ಲಿ ನಿಧೀಶ್ ಮುರಳೀಧರನ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆತ ತನ್ನ ಕುಟುಂಬದ ಗೆಳೆಯ ಎಂದು ಹೇಳಿದ್ದಾರೆ. ಆತ ತನ್ನ ಮೇಲೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಈ ದೌರ್ಜನ್ಯ ತನಗೆ ಮಾನಸಿಕ ಯಾತನೆ ಹಾಗೂ ಒಸಿಡಿ ಅನಾರೋಗ್ಯಕ್ಕೆ ಕಾರಣವಾಯಿತು ಎಂದಿದ್ದಾರೆ.

ಆದರೆ, ಈ ಪ್ರತಿಪಾದನೆಯನ್ನು ಸಮರ್ಥಿಸಲು ತನ್ನ ಬಳಿ ಯಾವುದೇ ಪುರಾವೆ ಇಲ್ಲ ಎಂದು ಅವರು ಹೇಳಿದ್ದಾರೆ. ಆರೆಸ್ಸೆಸ್‌ನ ವಿವಿಧ ಶಿಬಿರಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಕೂಡ ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News