×
Ad

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ನಟಿ ಖುಷ್ಬೂ ಸುಂದರ್ ನೇಮಕ

Update: 2025-07-31 16:52 IST

ಖುಷ್ಬೂ ಸುಂದರ್ (Photo: PTI)

ಚೆನ್ನೈ: ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಖುಷ್ಬೂ ಸುಂದರ್, “ನನಗೆ ನಿಜಕ್ಕೂ ತುಂಬಾ ಸಂತೋಷವಾಗಿದೆ” ಎಂದು ತಮ್ಮ ನೇಮಕ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ತನ್ನ ಮೇಲೆ ನಂಬಿಕೆ ಇರಿಸಿ, ಈ ಹುದ್ದೆ ನೀಡಿದ್ದಕ್ಕಾಗಿ ಪಕ್ಷದ ಹಿರಿಯ ನಾಯಕರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

“ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ, ವಿಶೇಷವಾಗಿ ನಾಲ್ವರು ಉಪಾಧ್ಯಕ್ಷರ ಮೇಲ್ವಿಚಾರಣೆಯಲ್ಲಿರುವ ದಕ್ಷಿಣ ಚೆನ್ನೈ ಅನ್ನು ಗುರಿಯಾಗಿಸಿಕೊಂಡು ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಹಂತದಲ್ಲಿ ಪಕ್ಷದ ಉಪಸ್ಥಿತಿಯನ್ನು ಬಲಿಷ್ಠಗೊಳಿಸುವುದು ನನ್ನ ತಕ್ಷಣದ ಆದ್ಯತೆಯಾಗಿದೆ. ನಮಗೆಷ್ಟು ಸಾಧ್ಯವೊ ಅಷ್ಟು ಜನರನ್ನು, ಸಾರ್ವಜನಿಕರನ್ನು ಹಾಗೂ ಮತದಾರರನ್ನು ತಲುಪಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಒಳಿತಿನ ಕುರಿತು ಮನವರಿಕೆ ಮಾಡಲು ಮತದಾರರನ್ನು ನೇರವಾಗಿ ಭೇಟಿ ಮಾಡಲು ಬಹುಶಃ ಮನೆ ಮನೆ ಅಭಿಯಾನ ನಡೆಸಬೇಕಾಗಿದೆ. ಪ್ರಧಾನಿ ಹಾಗೂ ಬಿಜೆಪಿ ದೇಶಕ್ಕೆ ಎಷ್ಟು ಒಳಿತನ್ನು ಮಾಡಿದೆ ಹಾಗೂ ಅವರಿಂದ ತಮಿಳುನಾಡಿನ ಮತದಾರರ ಜೀವನ ಶೈಲಿ ಹೇಗೆ ಸುಧಾರಿಸಲಿದೆ ಎಂಬುದರ ಕುರಿತು ಅರಿವು ಮೂಡಿಸಬೇಕಿದೆ” ಎಂದು ಅವರು India Todoay ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

ಎಐಎಡಿಎಂಕೆಯೊಂದಿಗಿನ ಮೈತ್ರಿ ಕುರಿತೂ ತಮ್ಮ ಅನಿಸಿಕೆ ಹಂಚಿಕೊಂಡಿರುವ ಖುಷ್ಬೂ ಸುಂದರ್, “ಎರಡೂ ಪಕ್ಷಗಳ ನಡುವೆ ಮೊದಲಿನಿಂದಲೂ ಸೌಹಾರ್ದ ಸಂಬಂಧವಿದೆ. ಚುನಾವಣೆಗಳಲ್ಲಿ ಹೋರಾಡಲು ನಮಗೆ ಎಐಎಡಿಎಂಕೆಯಂತಹ ಮೈತ್ರಿ ಪಕ್ಷ ಇದೆ ಎಂಬುದು ಸಂತಸದ ವಿಚಾರವಾಗಿದೆ. ಉಳಿದ ವಿಚಾರಗಳ ಕುರಿತು ಪಕ್ಷದ ಮುಖಂಡರು ಹಾಗೂ ಹಿರಿಯ ನಾಯಕರು ಮಾತುಕತೆ ನಡೆಸಿ, ನಿರ್ಧಾರ ಕೈಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.

ಇದೇ ವೇಳೆ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.

“ವಿಜಯ್ ಗೆ ಒಂದು ಸರಳ ಸಂದೇಶವಿದೆ. ಅವರನ್ನು ಬಲ್ಲ ನಾನು, ಅವರನ್ನು ಯಾವಾಗಲೂ ನನ್ನ ಕಿರಿಯ ಸೋದರನಂತೆ ನಡೆಸಿಕೊಂಡಿದ್ದೇನೆ. ನಿಮ್ಮ ಯೋಜನೆ ಡಿಎಂಕೆಯನ್ನು ಪರಾಭವಗೊಳಿಸುವುದಾಗಿದ್ದು, ಅದನ್ನು ಪರಾಭವಗೊಳಿಸಬೇಕಿದ್ದರೆ, ನಾವಿಬ್ಬರೂ ಒಟ್ಟಾಗಬೇಕಿದೆ ಎಂಬುದು ನನ್ನ ಭಾವನೆಯಾಗಿದೆ. ನಿಮಗೆ ತಮಿಳುನಾಡಿನ ಡಿಎಂಕೆ ಸರಕಾರದ ತಪ್ಪುಗಳು ಹಾಗೂ ವೈಫಲ್ಯಗಳು ತಿಳಿದಿವೆ. ನೀವು ಅವರ ವಿರುದ್ಧ ಮಾತನಾಡುತ್ತಿದ್ದೀರಿ. ಹೀಗಾಗಿ ಬಿಜೆಪಿ ಮತ್ತು ಎಐಎಡಿಎಂಕೆಯೊಂದಿಗೆ ತಮಿಳಗ ವೆಟ್ರಿ ಕಳಗಂ ಪಕ್ಷ ಕೈಜೋಡಿಸುವುದು ವಿವೇಕದ ನಿರ್ಧಾರವಾಗಲಿದೆ” ಎಂದು ಅವರು ನಟ ವಿಜಯ್ ಗೆ ಕಿವಿಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News